ಬಂಟ್ವಾಳ: ಬಿ.ಸಿ.ರೋಡ್ -ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ಸಾಕಷ್ಟು ಅಪಘಾತಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಸಾಕಷ್ಟು ಸುರಕ್ಷತ ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಜಕ್ರಿಬೆಟ್ಟುನಲ್ಲಿ ಬಂಟ್ವಾಳ ಪೇಟೆಯ ರಸ್ತೆಯಿಂದ ಹೆದ್ದಾರಿಗೆ
ಸಂಪರ್ಕಿಸುವ ಜಂಕ್ಷನ್‌ನಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗಿದೆ.
ಹೆದ್ದಾರಿಯಲ್ಲಿ ವಾಹನಗಳು ವೇಗದಲ್ಲಿ ಸಾಗುವ ಸಂದರ್ಭದಲ್ಲಿ ಬಂಟ್ವಾಳ ಪೇಟೆಯಿಂದ ಆಗಮಿಸಿದ ವಾಹನಗಳು ಹೆದ್ದಾರಿಯನ್ನು ಸಂಪರ್ಕಿಸುವ ಸಂದರ್ಭ ಸಾಕಷ್ಟು ಗೊಂದಲಗಳು ಉಂಟಾಗಿ ಅಪಘಾತಗಳು ಪುನರಾವರ್ತನೆಯಾಗುತ್ತಲೇ ಇತ್ತು. ಎರಡೂ ಬದಿ ವಾಹನಗಳ ಚಾಲಕರು, ಸವಾರರು ಈ ಪ್ರದೇಶದಲ್ಲಿ ಗೊಂದಲಕ್ಕೆ ಒಳಗಾಗುತ್ತಿದ್ದರು.
ಪ್ರಾರಂಭದಲ್ಲಿ ಪೇಟೆಯ ರಸ್ತೆಗೆ ಹಂಪ್ಸ್ ಹಾಕಿದ ಬಳಿಕವೂ ಅಪಘಾತಗಳು ಉಂಟಾದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗದಂತೆ ಡಿವೈಡರ್ ಕೂಡ ಹಾಕಲಾಗಿತ್ತು. ಆದರೂ ಅಪಘಾತಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹೆದ್ದಾರಿಯ ವಾಹನಗಳ ವೇಗವನ್ನು ನಿಯಂತ್ರಿಸುವ ದೃಷ್ಟಿಯಿಂದ ಇಲಾಖೆ ಪೇಟೆಯ ರಸ್ತೆಯ ಮೊದಲ ಮತ್ತು ಬಳಿಕ ಧರ್ಮೋಪ್ಲಾಸ್ಟರ್ ಲೈನ್‌ಗಳನ್ನು ಹಾಕಲಾಗಿತ್ತು.
ಇದೀಗ ಪೇಟೆಯ ವಾಹನಗಳು ಹೆದ್ದಾರಿಯನ್ನು ಸಂಪರ್ಕಿಸುವ ಸಂದರ್ಭದಲ್ಲಿ ಈ ಸಿಗ್ನಲ್ ಲೈಟ್ ವಾಹನ ಚಾಲಕರು/ಸವಾರರನ್ನು ಎಚ್ಚರಿಸುವ ಕಾರ್ಯ ಮಾಡಲಿದೆ. ಇದರ ಮೂಲಕ ವಾಹನಗಳು ನಿಯಂತ್ರಣಕ್ಕೆ ಬಂದರೆ ಸಾಕಷ್ಟು ಅಪಘಾತಗಳಿಗೆ ಕಡಿವಾಣ ಬೀಳಲಿದೆ. ಹೀಗಾಗಿ ವಾಹನದವರು ವೇಗ ನಿಯಂತ್ರಣಕ್ಕೆ ಗಮನ ನೀಡುವುದು ಅತೀ ಅಗತ್ಯವಾಗಿದೆ.
ಉದಯವಾಣಿ ಬೆಳಕು ಚೆಲ್ಲಿತ್ತು
ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ತತ್‌ಕ್ಷಣ ಜಕ್ರಿಬೆಟ್ಟು ಪ್ರದೇಶವು ಸಾಕಷ್ಟು ಅಪಘಾತಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ಉದಯವಾಣಿ ಸುದಿನದಲ್ಲಿ ವಿಶೇಷ ವರದಿ ಪ್ರಕಟಿಸಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಯನ್ನು ಎಚ್ಚರಿಸುವ ಕಾರ್ಯ ಮಾಡಿತ್ತು. ಜತೆಗೆ ಪೊಲೀಸ್ ಇಲಾಖೆ ಕೂಡ ವಾಹನಗಳು ವೇಗ ನಿಯಂತ್ರಿಸುವಂತೆ ಮಾಡಲು ಕ್ರಮಕೈಗೊಳ್ಳುವಂತೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.