Advertisement

ಬಂಟ್ವಾಳ: ಪುಟಾಣಿಗಳ ಕೇಂದ್ರದ ಅಡಿಪಾಯಕ್ಕೇ ಅಪಾಯ

05:45 PM May 23, 2024 | Team Udayavani |

ಬಂಟ್ವಾಳ: ಪುಟಾಣಿ ಮಕ್ಕಳಿಗೆ ಶೈಕ್ಷಣಿಕ ತಳಪಾಯ ನೀಡುವ ಕೆಲವು ಅಂಗನವಾಡಿ ಕಟ್ಟಡಗಳ ತಳಪಾಯವೇ ಅಪಾಯದಲ್ಲಿವೆ. ಹೀಗಾಗಿ ಬಂಟ್ವಾಳದಲ್ಲಿ 7 ಅಂಗನವಾಡಿ ಕೇಂದ್ರಗಳನ್ನು ಪರ್ಯಾಯ ವ್ಯವಸ್ಥೆಗೆ ಸ್ಥಳಾಂತರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. 7 ಅಂಗನವಾಡಿ ಕೇಂದ್ರಗಳ ಪಕ್ಕ ಇರುವ ಅಪಾಯಕಾರಿ ಮರಗಳನ್ನು ತೆರವು ಮಾಡುವಂತೆ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

Advertisement

ತಾಲೂಕಿನಲ್ಲಿ ಅತೀ ಹೆಚ್ಚಿನ ಅಂಗನವಾಡಿ ಕೇಂದ್ರಗಳು ಕಾರ್ಯಾಚರಿಸುತ್ತಿರುವುದರಿಂದ ಬಂಟ್ವಾಳ ಹಾಗೂ ವಿಟ್ಲ ಯೋಜನೆಗಳೆಂದು ವಿಭಾಗಿಸಲಾಗಿದೆ. ಬಂಟ್ವಾಳ ಯೋಜನೆಯಲ್ಲಿ ಒಟ್ಟು 341 ಅಂಗನವಾಡಿ ಕೇಂದ್ರಗಳಿದ್ದು,
ಅದರಲ್ಲಿ 324 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ.

ಬಂಟ್ವಾಳದಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಇನ್ನೂ ಒಂದಷ್ಟು ಕೇಂದ್ರಗಳಿಗೆ ಕಟ್ಟಡದ ಬೇಡಿಕೆ ಇದೆ. ಜಾಗದ ಸಮಸ್ಯೆಯ ಕಾರಣಕ್ಕೆ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸರಕಾರಿ ಜಾಗವೇ ಇಲ್ಲದಿರುವುದರಿಂದ ಕೆಲವೊಂದು ಕೇಂದ್ರ ಸಂಘ ಸಂಸ್ಥೆಗಳಲ್ಲಿ ಕಾರ್ಯಾಚರಿಸಬೇಕಾದ ಸ್ಥಿತಿ ಇದೆ.

7ಅಪಾಯಕಾರಿ ಕಟ್ಟಡಗಳು
1)ಅಡಿಪಾಯ, ಆವರಣ ಗೋಡೆ ಕುಸಿದ ನರಿಕೊಂಬು ಗ್ರಾಮದ ನೆಹರೂನಗರ ಕೇಂದ್ರವನ್ನು ನೆಹರೂ ನಗರ ಶಾಲೆಗೆ ಸ್ಥಳಾಂತರಿಸಲು ಅನುಮತಿ ಕೇಳಲಾಗಿದೆ.

2)ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆಳಗಿನ ಪೇಟೆಯ ಅಂಗನವಾಡಿ ಕೇಂದ್ರವು ನೆರೆಬಂದಲ್ಲಿ ಮುಳುಗಡೆಯಾಗಲಿದೆ. ಕೆಳಗಿನಪೇಟೆ ಕಿ.ಪ್ರಾ. ಶಾಲೆಗೆ ಸ್ಥಳಾಂತರಿಸಲು ಕೋರಿಕೆ.

Advertisement

3)ಮೇಲ್ಛಾವಣಿಯ ಮರದ ಹಲಗೆಗಳು ಗೆದ್ದಲು ಹಿಡಿದಿರುವುದರಿಂದ ಸಂಗಬೆಟ್ಟು ಗ್ರಾಮದ ಮಂಚಕಲ್ಲು ಅಂಗನವಾಡಿ ಕೇಂದ್ರವನ್ನು ಮಂಚಕಲ್ಲು ಕಿ.ಪ್ರಾ.ಶಾಲೆಗೆ ವರ್ಗಾವಣೆ.

4)ಅಪಾಯಕಾರಿ ಸ್ಥಿತಿಯಲ್ಲಿರುವ ಆಲದಪದವು ಕೇಂದ್ರ ವನ್ನು ಶ್ರೀನಿವಾಸನಗರ ಕಿ.ಪ್ರಾ.ಶಾಲೆಗೆ ಸ್ಥಳಾಂತರ

5)ಬಡಗಕಜೆಕಾರು ಗ್ರಾಮದ ಬ್ಯಾರಿಪಲ್ಕೆ ಕೇಂದ್ರ ಹೇಮಾವತಿ ಕದಿಮೇಲು ಅವರ ಮನೆಗೆ ಪಲ್ಲಟ

6)ಬಡಗಬೆಳ್ಳೂರಿನ ಪಡೀಲುಬೈಲು ಕೇಂದ್ರ

7)ಕರಿಯಂಗಳ ಗ್ರಾಮದ ಕಲ್ಲಗುಡ್ಡೆ ಕೇಂದ್ರವನ್ನು ನೆರೆಯ ಮನೆಗೆ ಸ್ಥಳಾಂತರಿಸಲು ಅನುಮತಿ ಗಾಗಿ ಬೇಡಿಕೆ.

7 ಕಡೆ ಮರ ಬೀಳುವ ಸ್ಥಿತಿಯ ಕೇಂದ್ರಗಳು
ಬಂಟ್ವಾಳ ವ್ಯಾಪ್ತಿಯಲ್ಲಿ ಒಟ್ಟು 7 ಅಂಗನವಾಡಿ ಕೇಂದ್ರಗಳಿಗೆ ಮರಗಳು ಬೀಳುವ ಅಪಾಯವಿದೆ.

1)ಕಾವಳಮೂಡೂರು ಗ್ರಾಮದ ಕಾರಿಂಜಬೈಲು ಅಂಗನವಾಡಿ ಕೇಂದ್ರ ಬಳಿ 4 ಮರಗಳು ಅಪಾಯಕಾರಿಯಾಗಿವೆ.

2)ನೆಲ್ಲಿಗುಡ್ಡೆ ಕೇಂದ್ರದ ಬಳಿ 2 ಮರಗಳು ಅಪಾಯಕಾರಿ ಮರಗಳಿವೆ.

3)ಬಂಟ್ವಾಳ ಪುರಸಭಾ ವ್ಯಾಪ್ತಿಯ ಹೊಸ್ಮಾರು

4)ನರಿಕೊಂಬು ಗ್ರಾಮದ ನಿನ್ನಿಪಡ್ಪು ಕೇಂದ್ರ

5)ಮುಗ್ಧಾಲ್‌ ಗುಡ್ಡೆ,

6)ದೇವಶ್ಯಮೂಡೂರು ಗ್ರಾಮದ ಕುಂಟಾಲಪಲ್ಕೆ

7)ಕರಿಯಂಗಳ ಗ್ರಾಮದ ಪುಂಚಮೆ ಕೇಂದ್ರ

ಅನುಮತಿ ಬಳಿಕ ಸ್ಥಳಾಂತರ
ಸುಮಾರು 7 ಕೇಂದ್ರಗಳನ್ನು ಸರಕಾರಿ ಶಾಲೆ ಹಾಗೂ ಇತರ ವ್ಯವಸ್ಥೆಗಳಿಗೆ ಸ್ಥಳಾಂತರಿಸಲು ಈಗಾಗಲೇ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದ್ದು, ಅನುಮತಿಯ ಬಳಿಕ ಸ್ಥಳಾಂತರ ನಡೆಯಲಿದೆ.
*ಉಸ್ಮಾನ್‌, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ.ಜಿಲ್ಲೆ

ಒಪ್ಪಿಗೆ ಪಡೆದು ಮರ ತೆರವು
ಅಪಾಯಕಾರಿ ಮರಗಳ ತೆರವಿಗೆ ಸಂಬಂಧಿಸಿ ತಹಶೀಲ್ದಾರ್‌ ಅವರಿಂದ ಪತ್ರ ಬಂದಿದ್ದು,
ಅದನ್ನು ಡಿಎಫ್‌ಒ ಅವರಿಗೆ ಕಳುಹಿಸಿ ಅನುಮತಿ ಪಡೆದ ಬಳಿಕ ತೆರವು ಕಾರ್ಯ ನಡೆಸುತ್ತೇವೆ. ಕೆಲವು ಮರಗಳ ರೆಂಬೆ ಕಡಿದರೂ ಸಾಲುತ್ತಿದೆ.

ಪ್ರಫುಲ್‌ ಶೆಟ್ಟಿ ಪಿ.,ವಲಯ ಅರಣ್ಯಾಧಿಕಾರಿ, ಬಂಟ್ವಾಳ

*ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next