ಬಂಟ್ವಾಳ: ಕೆಲವು ದಿನಗಳ ಹಿಂದೆ ರಾಜ್ಯ ಚುನಾವಣ ಆಯೋಗವು ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ಗಳನ್ನು ಪುನರ್ ವಿಂಗಡಣೆ ಮಾಡುವ ದೃಷ್ಟಿಯಿಂದ ಸಂಖ್ಯೆಗಳನ್ನು ನೀಡಿದ್ದು, ಇದೀಗ ಉಳ್ಳಾಲ ತಾಲೂಕಿಗೆ ಪ್ರತ್ಯೇಕ ಚುನಾವಣೆಯ ದೃಷ್ಟಿಯಿಂದ ಬಂಟ್ವಾಳ ತಾಲೂಕಿನ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳಲ್ಲಿ ಮತ್ತಷ್ಟು ವ್ಯತ್ಯಯ ಆಗಲಿದೆ.
ಈ ಹಿಂದೆ 34 ಕ್ಷೇತ್ರಗಳನ್ನು ಹೊಂದಿರುವ ಬಂಟ್ವಾಳ ತಾಲೂಕು ಪಂಚಾಯತ್‌ಗೆ ಕಳೆದ ಕೆಲವು ದಿನಗಳ ಹಿಂದೆ ಬಂದ ಆದೇಶದಲ್ಲಿ ಅದು 28ಕ್ಕೆ ಇಳಿಯಲ್ಪಟ್ಟಿತ್ತು. ಆದರೆ ಈ ಬಾರಿ ಉಳ್ಳಾಲ ತಾ.ಪಂ.ಗೆ ಪ್ರತ್ಯೇಕ ಚುನಾವಣೆ ಇಲ್ಲ ಎನ್ನಲಾಗಿತ್ತು. ಆದರೆ ಹೊಸ ಆದೇಶದ ಪ್ರಕಾರ ಈ ಬಾರಿಯೇ ಉಳ್ಳಾಲ ತಾ.ಪಂ.ಗೆ ಪ್ರತ್ಯೇಕ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಹೀಗಾಗಿ ಬಂಟ್ವಾಳ ತಾ.ಪಂ.ನ ಸ್ಥಾನಗಳು ಮತ್ತಷ್ಟು ಇಳಿಕೆಯಾಗಲಿವೆ.
ಈಗಾಗಲೇ ಉಳ್ಳಾಲ ತಾಲೂಕಿಗೆ ತಹಶೀಲ್ದಾರ್ ನೇಮಕವಾಗಿದ್ದು, ಅವರ ನೇತೃತ್ವದಲ್ಲೇ ತಾಲೂಕಿನಲ್ಲಿ ಜಿ.ಪಂ., ತಾ.ಪಂ. ಚುನಾವಣೆ ನಡೆಯುವ ಸಾಧ್ಯತೆ ಇದೆ. ವಿರೋಧದ ಮಧ್ಯೆಯೂ ಬಂಟ್ವಾಳದ ಸಜೀಪನಡು ಗ್ರಾ.ಪಂ. ಉಳ್ಳಾಲ ತಾಲೂಕಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ.
ಈ ಹಿಂದಿನ ಆದೇಶದ ಪ್ರಕಾರ 30ರ ಬದಲು ಬಂಟ್ವಾಳ ತಾಲೂಕಿನಲ್ಲಿ 28 ತಾ.ಪಂ. ಕ್ಷೇತ್ರಗಳನ್ನು ನಿಗದಿ ಮಾಡ ಲಾಗಿತ್ತು. ಆದರೆ ಫೆ. 18ರಂದು ಹೊಸ ಆದೇಶ ಬಂದಿದ್ದು, 28ರ ಬದಲು 24 ತಾ.ಪಂ. ಕ್ಷೇತ್ರಗಳು ಬಂಟ್ವಾಳದಲ್ಲಿ ಉಳಿಯಲಿವೆ. ಸದ್ಯಕ್ಕೆ ಬಂಟ್ವಾಳ ತಾ.ಪಂ. ವ್ಯಾಪ್ತಿಯಲ್ಲಿರುವ ನರಿಂಗಾನ, ಸಜೀಪಪಡು, ಕುರ್ನಾಡು, ಬಾಳೆಪುಣಿ ಕ್ಷೇತ್ರ ಪ್ರತ್ಯೇಕಗೊಳ್ಳುವ ಸಾಧ್ಯತೆ ಇದೆ.
ಪ್ರಸ್ತುತ ಆಡಳಿತದಲ್ಲಿರುವ ಕ್ಷೇತ್ರಕ್ಕಿಂತ ಒಟ್ಟು 10 ಕ್ಷೇತ್ರಗಳು ಬಂಟ್ವಾಳದಲ್ಲಿ ಕಡಿಮೆಯಾಗಲಿವೆ. ತಾಲೂಕಿನಲ್ಲಿರುವ ಜಿ.ಪಂ. ಕ್ಷೇತ್ರದಲ್ಲೂ ವ್ಯತ್ಯಾಸವಾಗಿದ್ದು, ಹಿಂದಿನ ಆದೇಶದಲ್ಲಿ 9 ಜಿ.ಪಂ.ಕ್ಷೇತ್ರಗಳ ಬದಲು 10 ಆಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಹೊಸ ಆದೇಶದಲ್ಲಿ ಮತ್ತೆ ಅದನ್ನು 9ಕ್ಕೆ ಇಳಿಸಲಾಗಿದೆ. ಹೀಗಾಗಿ ಜಿ.ಪಂ. ಕ್ಷೇತ್ರ ಪುನರ್ ವಿಂಗಡಣೆಯಾಗಲಿದ್ದರೂ ಸಂಖ್ಯೆ ಮಾತ್ರ ಸದ್ಯಕ್ಕೆ ಇರುವ 9 ಕ್ಷೇತ್ರ ಮುಂದುವರಿಯಲಿದೆ. ಬಂಟ್ವಾಳದ ಕುರ್ನಾಡು ಜಿ.ಪಂ. ಕ್ಷೇತ್ರ ಸಂಪೂರ್ಣ ವಾಗಿ ಉಳ್ಳಾಲ ಭಾಗಕ್ಕೆ ಹೋಗಲಿದೆ.
7 ಗ್ರಾ.ಪಂ.ಗಳು ಕಡಿತ
ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿರುವ ಬಾಳೆಪುಣಿ, ಇರಾ, ಕುರ್ನಾಡು, ನರಿಂಗಾನ, ಫಜೀರು, ಸಜೀಪನಡು, ಸಜೀಪಪಡು ಗ್ರಾ.ಪಂ.ಗಳು ಉಳ್ಳಾಲಕ್ಕೆ ಸೇರ್ಪಡೆಯಾಗಲಿವೆ. ಈ ಹಿಂದೆ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾ.ಪಂ.ಗಳು ಉಳ್ಳಾಲಕ್ಕೆ ಸೇರ್ಪಡೆಯ ಮಾತುಗಳು ಕೇಳಿಬಂದರೂ ವಿರೋಧದ ಪರಿಣಾಮ ಪುದು, ತುಂಬೆ ಹಾಗೂ ಮೇರಮಜಲು ಗ್ರಾ.ಪಂ.ಗಳು ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲೇ ಉಳಿಯಲಿವೆ. ಆದರೆ ಅವರ ವಿಧಾನಸಭಾ ಕ್ಷೇತ್ರ ಮಂಗಳೂರು ಆಗಿರುತ್ತದೆ.
ಹೊಸ ಆದೇಶ ಬಂದಿದೆ
ಬಂಟ್ವಾಳ ತಾಲೂಕು ವ್ಯಾಪ್ತಿಗೆ ಬರುವ ಉಳ್ಳಾಲ ಭಾಗದ ಜಿ.ಪಂ.ಹಾಗೂ ತಾ.ಪಂ.ಕ್ಷೇತ್ರಗಳನ್ನು ಪ್ರತ್ಯೇಕ ಮಾಡುವಂತೆ ಆದೇಶ ಬಂದಿದೆ. ಹೀಗಾಗಿ ಕಳೆದ ಆದೇಶದಲ್ಲಿದ್ದ ತಾ.ಪಂ.ನ 28ರ ಬದಲು 24 ಹಾಗೂ ಜಿ.ಪಂ.ನ 10ರ ಬದಲು 9 ಕ್ಷೇತ್ರಗಳು ಬಂಟ್ವಾಳ ತಾಲೂಕಿನಲ್ಲಿ ಉಳಿಯಲಿವೆ.
-ರಶ್ಮಿ ಎಸ್.ಆರ್., ತಹಶೀಲ್ದಾರ್, ಬಂಟ್ವಾಳ