Advertisement
ಎರಡು ಕಡೆಗಳಲ್ಲಿ ಬಂಟ್ವಾಳ ಪುರಸಭೆಯ ವತಿ ಯಿಂದ ಬಸ್ ನಿಲ್ದಾಣ ಹಾಗೂ ಶೌಚಾಲಯ ನಿರ್ಮಾಣ ಗೊಂಡಿದ್ದು, ಇದರಲ್ಲಿ ಬಡ್ಡಕಟ್ಟೆಯ ಬಸ್ ನಿಲ್ದಾಣ ಹಾಗೂ ಶೌಚಾಲಯ ಎರಡೂ ಕೂಡ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಆದರೆ ಕೊಟ್ರಮ್ಮನಗಂಡಿಯಲ್ಲಿ ನಿಲ್ದಾಣ ಸುಸಜ್ಜಿತ ಸ್ಥಿತಿಯಲ್ಲಿದ್ದು, ಶೌಚಾಲಯ ಸುಸ್ಥಿತಿಯಲ್ಲಿದ್ದರೂ ಪೊದೆಗಳಿಂದ ಅವರಿಸಿಕೊಂಡಿದೆ.
Related Articles
Advertisement
ತಂಗುದಾಣದ ಅನಿವಾರ್ಯತೆ ಇಲ್ಲದೇ ಇದ್ದರೂ, ಈ ಪ್ರದೇಶಕ್ಕೆ ಸುಸಜ್ಜಿತ ಶೌಚಾಲಯ ತೀರಾ ಅಗತ್ಯವಾಗಿದೆ. ಬಡ್ಡಕಟ್ಟೆ ಯಲ್ಲಿ ಪುರಸಭೆಯದ್ದೇ ಎರಡು ವಾಣಿಜ್ಯ ಸಂಕೀರ್ಣಗಳು, ಹತ್ತಾರು ಇತರ ಕಟ್ಟಡಗಳಿದ್ದು, ಅಲ್ಲಿನ ವರ್ತಕರು, ಗ್ರಾಹಕರು, ಇತರ ಸಾರ್ವಜನಿಕರಿಗೆ ಶೌಚಾಲಯ ಅಗತ್ಯವಾಗಿದೆ.
ಸುತ್ತಲೂ ಇರುವ ಪೊದೆಗಳ ತೆರವು
ಕೊಟ್ರಮ್ಮನಗಂಡಿಯಲ್ಲಿ ಕೆಲವು ವರ್ಷಗಳ ಹಿಂದಷ್ಟೇ ತಂಗುದಾಣ, ಶೌಚಾಲಯ ನಿರ್ಮಿಸಲಾಗಿದ್ದು, ಜತೆಗೆ ಬಸ್‌ಗಳು ನಿಲ್ಲುವ ಜಾಗಕ್ಕೂ ಕಾಂಕ್ರೀಟ್ ಅಳವಡಿಸಲಾಗಿದೆ. ಆದರೆ ಇಲ್ಲಿಗೆ ಬಸ್ ಗಳು ಆಗಮಿಸದೇ ಎಲ್ಲೋ ಅಂಗಡಿಯ ಮುಂದೆ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದೆ. ಪ್ರಸ್ತುತ ಶೌಚಾಲಯದ ಸುತ್ತ ಪೊದೆಗಳು ಬೆಳೆದುಕೊಂಡಿದ್ದು, ಮಹಿಳೆಯರ ಶೌಚಾಲಯ ಇರುವ ಭಾಗಕ್ಕೆ ಹೆದರಿಕೆಯಿಂದಲೇ ತೆರಳಬೇಕಾದ ಸ್ಥಿತಿ ಇದೆ. ಹೀಗಾಗಿ ಪೊದೆಗಳು ಬಾರದ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ.
ನಿರ್ವಹಣೆಗೆ ನೀಡಬೇಕಿದೆ
ಪ್ರಸ್ತುತ ದಿನಗಳಲ್ಲಿ ಬಹುತೇಕ ಕಡೆ ಸುಸಜ್ಜಿತ ಶೌಚಾಲಯ ನಿರ್ಮಿಸಿ ಅವುಗಳನ್ನು ನಿರ್ವಹಣೆಗಾಗಿ ಖಾಸಗಿ ಸಂಸ್ಥೆಗಳಿಗೆ ನೀಡಲಾಗುತ್ತದೆ. ಅವರು ಶೌಚಾಲಯದ ಉಪಯೋಗಕ್ಕೆ ನಿಗದಿತ ಶುಲ್ಕವನ್ನು ತೆಗೆದುಕೊಂಡು ನಿರ್ವಹಣೆ ಮಾಡುತ್ತಾರೆ. ಪ್ರಸ್ತುತ ಈ ಎರಡೂ ಶೌಚಾಲಯಗಳನ್ನೂ ಅಭಿವೃದ್ಧಿ ಪಡಿಸಿ ನಿರ್ವಹಣೆಗೆ ನೀಡುವ ಕುರಿತು ಪುರಸಭೆ ಯೋಚಿಸಬೇಕಿದೆ.
ಶೌಚಾಲಯ ದುರಸ್ತಿಗೆ ಕ್ರಮ: ಬಂಟ್ವಾಳದ ಎರಡೂ ಶೌಚಾಲಯಗಳನ್ನು ಸಾರ್ವಜನಿಕರಿಗೆ ಯೋಗ್ಯವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಬಡ್ಡಕಟ್ಟೆಯ ಶೌಚಾಲಯದ ದುರಸ್ತಿಯ ಕುರಿತು ಈಗಾಗಲೇ ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. ಮಳೆ ಕಡಿಮೆಯಾದ ತತ್‌ಕ್ಷಣ ದುರಸ್ತಿಯ ಕಾರ್ಯ ಆರಂಭಗೊಳ್ಳಲಿದೆ. – ಎಂ.ಆರ್. ಸ್ವಾಮಿ ಮುಖ್ಯಾಧಿಕಾರಿಗಳು, ಬಂಟ್ವಾಳ ಪುರಸಭೆ