ಬಂಟ್ವಾಳ: ಆನ್‌ಲೈನ್ ಮೂಲಕ ಖರೀದಿಸಿದ ವಸ್ತುವೊಂದರ ಲೋಪದ ಕುರಿತು ಕರೆ ಮಾಡಿದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಬ್ಯಾಂಕ್ ವಿವರಗಳನ್ನು ಪಡೆದುಕೊಂಡು ಖಾತೆಯಿಂದ 63 ಸಾವಿರ ರೂ. ಎರಗಿಸಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.
ಬಿ.ಸಿ.ರೋಡಿನ ಮೊಡಂಕಾಪು ನಿವಾಸಿ ವಿಶಾಲ್ ಎಂ. ಎಕ್ಕುಂಡಿ ಅವರ ಪತ್ನಿ ಲಲಿತಾ ಕಳೆದ ಜು. 18ರಂದು ಆನ್‌ಲೈನ್ ಮೂಲಕ ಬುಕ್ ಮಾಡಿದ್ದು, ಜು. 26ರಂದು ಅದು ಮನೆಗೆ ಬಂದಿರುತ್ತದೆ. ಆದರೆ ಅದು ಸರಿ ಇಲ್ಲ ಎಂದು ಸಂಬಂಧಪಟ್ಟ ಕಂಪೆನಿಯಲ್ಲಿ ವಿಚಾರಿಸುವುದಕ್ಕಾಗಿ ಇಂಟರ್ನೆಟ್‌ನಲ್ಲಿ ಸರ್ಚ್ ಮಾಡಿ ಸಂಪರ್ಕ ಸಂಖ್ಯೆಯನ್ನು ಪಡೆದರು.
ವಿಶಾಲ್ ಅವರು ಕರೆ ಮಾಡಿದಾಗ ಎದುರಿನಿಂದ ಮಾತನಾಡುತ್ತಿದ್ದ ಅಪರಿಚಿತ ವ್ಯಕ್ತಿ ಸೂಚಿಸಿದಂತೆ ಪತ್ನಿಯ ಬ್ಯಾಂಕ್ ಖಾತೆ ವಿವರ, ಎಟಿಎಂ ಕಾರ್ಡ್ ವಿವರಗಳನ್ನು ನೀಡಿದ್ದು, ಆ ವೇಳೆ ಖಾತೆಯಿಂದ 63 ಸಾವಿರ ರೂ. ಬೇರೆ ಖಾತೆಗೆ ವರ್ಗಾವಣೆಗೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.