Advertisement

ಬಂಟ್ವಾಳ: ಬಡ ಕುಟುಂಬಕ್ಕೆ ಈಗಲೂ ಮುಳಿಹುಲ್ಲಿನ ಸೂರು

05:52 AM Jan 07, 2019 | |

ಬಂಟ್ವಾಳ : ಸರಕಾರ ನೀಡುವ ಸವಲತ್ತುಗಳು ಗ್ರಾಮಾಂತರ ಜನತೆಗೆ ಮುಟ್ಟಿಸುವಲ್ಲಿನ ವೈಫಲ್ಯಕ್ಕೆ ಸಾಕ್ಷಿಯೋ ಎಂಬಂತೆ ಬಂಟ್ವಾಳ ತಾ|ನಲ್ಲಿ 5 ಬಡ ಕುಟುಂಬಗಳು ಮುಳಿ ಹುಲ್ಲಿನ ಮನೆ ಯಲ್ಲಿ ಇಂದಿಗೂ ವಾಸ್ತವ್ಯ ಹೊಂದಿವೆ.

Advertisement

ಐದು ಮುಳಿಹುಲ್ಲಿನ ಮನೆ
ಇಲಾಖೆ ಅಂಕಿಅಂಶ ಪ್ರಕಾರ ಬಂಟ್ವಾಳ ತಾ|ನಲ್ಲಿ 5 ಮುಳಿಹುಲ್ಲಿನ ಮನೆಗಳಿವೆ. ಪಂಜಿಕಲ್ಲು ಗ್ರಾಮದಲ್ಲಿ ಕೇಶವ ಭಂಡಾರಿ ಮುಳಿಹುಲ್ಲಿನ ಮನೆಯಲ್ಲಿ ಈಗಲೂ ವಾಸ್ತವ್ಯ ಇದ್ದಾರೆ. ಅವರಿಗೆ ಸ್ವಂತ ಜಮೀನು ಇದೆ. ಕೃಷಿ ಕೂಲಿ ಕಾರ್ಮಿಕರು. ಬಸವ ಹೆಚ್ಚುವರಿ ವಸತಿ ಯೋಜನೆಯ ಫಲಾನುಭವಿ ಆಗಿದ್ದರೂ ಅದೇ ಹಣದಿಂದ ಮನೆ ನಿರ್ಮಾಣ ಪೂರ್ಣ ಗೊಳಿಸಲು ಸಾಧ್ಯ ವಾಗಿಲ್ಲ. ಯೋಜನೆ ಹಣ ಮನೆ ನಿರ್ಮಾ ಣಕ್ಕೆ ಸಾಕಾಗುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಪುಣಚ ಗ್ರಾಮದ ದೇವಿನಗರದ ಯಮುನಾ ಕೊರಗಪ್ಪ ಮೇರ ಅವರು ಧಣಿಯ ಪಟ್ಟಾ ಜಮೀನಿನ ಮುಳಿಹುಲ್ಲಿನ ಮನೆಯಲ್ಲಿ ವಾಸ್ತವ್ಯ ಇದ್ದಾರೆ. ಸರಕಾರದಿಂದ ಅವರಿಗೆ ಜಮೀನು ಮಂಜೂರು ಆಗಿದೆ. ಮನೆ ನಿರ್ಮಿಸಲು ನೀಡಬೇಕಾದ ಯೋಜನೆ ವಿವಿಧ ಕಾರಣ ಗಳಿಂದ ಮಂಜೂರಾತಿ ಆಗಿಲ್ಲ. ಪುಣಚ ಗ್ರಾಮದ ಕಂಬಳಿಮೂಲೆ ನಿವಾಸಿ ವಸಂತಿ ಶಾಂತಪ್ಪ ಗೌಡ ಮುಳಿ ಹುಲ್ಲಿನ ಛಾವಣಿಗೆ ಪ್ಲಾಸ್ಟಿಕ್‌ ಹೊದೆಸಿ ಅದರಲ್ಲಿ ವಾಸ್ತವ್ಯ ಇದ್ದಾರೆ.

ಕಳ್ಳಿಗೆ ಗ್ರಾಮ ಪಚ್ಚಿನಡ್ಕ ಚಿತ್ರಕಲಾ ಬಿನ್‌ ಮೋಹನ ಅವರು ಮುಳಿಹುಲ್ಲಿನ ಮನೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ. ಜಮೀನು ಹಕ್ಕುಪತ್ರ ಸಮರ್ಪಕ ಇಲ್ಲದ ಕಾರಣ ಅವರಿಗೆ ಸರಕಾರದ ಯೋಜನೆ ಅನುಷ್ಠಾನಿಸುವಲ್ಲಿ ವ್ಯವಸ್ಥೆಗಳು ಆಗಿಲ್ಲ.

ಕನ್ಯಾನ ಗ್ರಾಮದ ನಾರಾಯಣ ಮೂಲ್ಯ ಸರಕಾರಿ ಜಮೀನಿನಲ್ಲಿ ಇದ್ದಂತಹ ಮುಳಿಹುಲ್ಲಿನ ಮನೆಯಲ್ಲಿ ವಾಸ್ತವ್ಯ ಇದ್ದವರು. ಮಳೆಗಾಲದಲ್ಲಿ ಮುಳಿ ಹುಲ್ಲಿನ ಮನೆಗೆ ಪ್ಲಾಸ್ಟಿಕ್‌ ಹೊದೆಸಿದರೂ ಬಿದ್ದು ಹೋಗಿದ್ದು, ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಸರಕಾರದಿಂದ ಪ್ರತ್ಯೇಕ ಜಮೀನು ಮಂಜೂರಾತಿ ನೀಡಲಾಗಿದೆ. ಛಾವಣಿ ಮನೆಯಾಗಿ ಪರಿವರ್ತಿಸುವುದಕ್ಕೆ ಕ್ರಮ ಆಗಿಲ್ಲ.

Advertisement

ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಅಂಕಿಅಂಶ ಪ್ರಕಾರ ತಾ|ನಲ್ಲಿ 4,350 ಮಂದಿ ಮನೆ ಇಲ್ಲದವರಿದ್ದಾರೆ. 9,620 ಮಂದಿ ನಿವೇಶನ ರಹಿತರಾಗಿದ್ದಾರೆ. ಒಟ್ಟು 13,970 ಮಂದಿ ವಸತಿ ರಹಿತರಾಗಿದ್ದಾರೆ. 21,905 ಸಂಖ್ಯೆ ವಸತಿ ಭಾಗ್ಯ ಪಡೆದವರಲ್ಲಿ 4,864 ಮಂದಿ ಮನೆ ನಿರ್ಮಿಸಿಕೊಂಡಿಲ್ಲ. ಮುಳಿಹುಲ್ಲಿನ ಮನೆಮಂದಿಯನ್ನು ಈಗಾಗಲೇ ಪಿಡಿಒ ಮೂಲಕ ಸಂಪರ್ಕಿಸಿ ಸರಕಾರದ ನಿಯಮಾನುಸಾರ ಮನೆ ನೀಡುವ ಕ್ರಮವನ್ನು ಮಾಡಲಾಗಿದೆ. ವಿಷಯ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ರಾಜಣ್ಣ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ

ಫಲಾನುಭವಿಗಳನ್ನು ಸಂಪರ್ಕಿಸಿ ಕ್ರಮ
ಮುಳಿಹುಲ್ಲಿನ ಮನೆಯನ್ನು ಛಾವಣಿ ಮನೆಯಾಗಿ ಪರಿವರ್ತಿಸಲು ಸರಕಾರದಿಂದ ಸಾಕಷ್ಟು ಯೋಜನೆಗಳು ಇವೆ. ನಿಯಮಾನುಸಾರ ಕ್ರಮ ಆಗುವುದು ಅವಶ್ಯ. ಫಲಾನುಭವಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಗಮನ ಹರಿಸುತ್ತೇನೆ. ಬಡವರಿಗೆ ನೆರವಾಗುವಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮದ ಬದಲು ಹೊಂದಾಣಿಕೆ ಒಡಂಬಡಿಕೆಯಲ್ಲಿ ಕೆಲಸ ಸಾಧಿಸಬೇಕು.
ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು,
  ಶಾಸಕರು

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next