ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪಮುನ್ನೂರಿನಲ್ಲಿ ಹಾಡಹಗಲಲ್ಲೇ ನಡೆದ ಕಳವು ಪ್ರಕರಣದ ಆರೋಪಿಗಳನ್ನು ಭೇಟೆಯಾಡಿರುವ ಪೊಲೀಸರು ಇಬ್ಬರ ಆರೋಪಿಗಳ ಸಹಿತ 15.56 ಲಕ್ಷ ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಕಸಬಾ ಬೆಂಗ್ರೆ ನಿವಾಸಿ ಫರಾಜ್ (27) ಹಾಗೂ ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ತೌಸಿಫ್ ಅಹಮ್ಮದ್ (34) ಬಂಧಿತ ಆರೋಪಿಗಳು. ಈ ಕಳ್ಳರು ಸೆ. 1ರಂದು ಸಜೀಪಮುನ್ನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮೈಕಲ್ ಡಿ’ಸೋಜಾ ಅವರ ಮನೆಯ ಮುಂಬಾಗಿಲನ್ನು ಮುರಿದು ಕೋಣೆಯ ಕಪಾಟಿನಲ್ಲಿದ್ದ ಸುಮಾರು 5.36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಸುಮಾರು 3 ಸಾವಿರ ರೂ. ಮೌಲ್ಯದ ಬೆಳ್ಳಿಯ ಸಾಮಗ್ರಿಗಳನ್ನು ಕಳವು ಮಾಡಿದ್ದರು. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳವಿನ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 12.23 ಲಕ್ಷ ರೂ. ಮೌಲ್ಯದ 223 ಗ್ರಾಂ ಚಿನ್ನಾಭರಣ, 3 ಸಾವಿರ ರೂ. ಮೌಲ್ಯದ ಬೆಳ್ಳಿ ಸೊತ್ತುಗಳು, 3.30 ಲಕ್ಷ ರೂ. ಮೌಲ್ಯದ ಕೃತ್ಯಕ್ಕೆ ಬಳಸಿದ ಮಹೀಂದ್ರ ಝೈಲೋ ಕಾರು, ಬೈಕ್ ಸೇರಿದಂತೆ 15.56 ಲಕ್ಷ ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ವಶಪಡಿಸಿಕೊಂಡ ಚಿನ್ನಾಭರಣಗಳ ಪೈಕಿ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ಚಿನ್ನಾಭರಣಗಳು ಕೂಡ ಸೇರಿವೆ. ಆರೋಪಿ ಫರಾಜ್‌ನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲೂ ಮನೆ ಕಳ್ಳತನ ಪ್ರಕರಣ ದಾಖಲಾಗಿದೆ.
ಎಸ್ಪಿ ಸಿ.ಬಿ. ರಿಷ್ಯಂತ್ ಅವರ ನಿರ್ದೇಶನದಂತೆ ಎಎಸ್‌ಪಿ ಧರ್ಮಪ್ಪ ಎನ್.ಎಂ., ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಸಿಂಗ್ ಥೋರಾಟ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ನಾಗರಾಜ್ ಎಚ್.ಇ. ನೇತೃತ್ವದಲ್ಲಿ ಪಿಎಸ್‌ಐ ರಾಮಕೃಷ್ಣ, ಕಲೈಮಾರ್, ಎಎಸ್‌ಐ ನಾರಾಯಣ, ಹೆಡ್ ಕಾನ್‌ಸ್ಟೆಬಲ್ ಇರ್ಷಾದ್, ಪಿ. ರಾಜೇಶ್, ಮನೋಹರ, ಕಾನ್‌ಸ್ಟೆಬಲ್ ಉಮೇಶ್ ಹಿರೇಮಠ, ರಂಗನಾಥ್, ಜಿಲ್ಲಾ ಬೆರಳಚ್ಚು ಘಟಕದ ಸಚಿನ್, ಉದಯ, ಜಿಲ್ಲಾ ಗಣಕಯಂತ್ರ ಕೇಂದ್ರದ ದಿವಾಕರ, ಸಂಪತ್ ಅವರು ಆರೋಪಿಗಳ ಪತ್ತೆಗೆ ಶ್ರಮಿಸಿದ್ದರು.