ಬಂಟ್ವಾಳ: ಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಷನ್-ನಗರ 2.0 ಉದ್ಘಾಟನೆ ಮತ್ತು ಅಮೃತ್ ಯೋಜನೆಯ ವಾರ್ಷಿಕೋತ್ಸವವು ಅ. 1ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ. ಈ ಕಾರ್ಯ ಕ್ರಮದಲ್ಲಿ ಬಂಟ್ವಾಳ ಪುರಸಭೆಯ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ಭಾಗವಹಿಸಲಿದ್ದಾರೆ.
ಸ್ವಚ್ಛ ಭಾರತ್ ಯೋಜನೆಯ ಪರಿಣಾಮ ಕಾರಿ ಅನುಷ್ಠಾನದ ಹಿನ್ನೆಲೆಯಲ್ಲಿ ರಾಜ್ಯದ 6 ನಗರ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ. ಬಂಟ್ವಾಳ ಪುರಸಭೆಯ ಅಧ್ಯಕ್ಷ ಮಹ ಮ್ಮದ್ ಶರೀಫ್ ಮತ್ತು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ಕೇಂದ್ರ ಸರಕಾರದ ಪೌರಾಡಳಿತ ನಿರ್ದೇಶನಾಲಯ ಆಹ್ವಾನದ ಮೇರೆಗೆ ಗುರುವಾರ ಹೊಸದಿಲ್ಲಿಗೆ ತೆರಳಿದ್ದಾರೆ.
ಡಾ| ಅಂಬೇಡ್ಕರ್ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನಡೆಯುವ ಕಾರ್ಯಕ್ರಮ ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಕರಾವಳಿಯಿಂದ ಬಂಟ್ವಾಳ ಪುರಸಭೆ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ. ರಾಜ್ಯದಿಂದ ಬಂಟ್ವಾಳದ ಜತೆಗೆ ಮೈಸೂರು, ದಾವಣಗೆರೆ, ಶಿವಮೊಗ್ಗ ಮಹಾನಗರಪಾಲಿಕೆಗಳು, ಹೊಸಕೋಟೆ ನಗರಸಭೆ, ಶಿಗ್ಗಾಂವಿ ಪುರಸಭೆಗಳ ಮೇಯರ್-ಅಧ್ಯಕ್ಷ ಮತ್ತು ಕಮಿಷನರ್-ಮುಖ್ಯಾಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ. ರಾಜ್ಯದ ನಗರ ಸ್ಥಳೀಯಾಡಳಿತ ಸಂಸ್ಥೆಗಳ 13 ಮಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಬಂಟ್ವಾಳ ಪುರಸಭೆಯು ಸರಕಾರದ ಅಮೃತ್ ಯೋಜನೆಗೆ ಆಯ್ಕೆಯಾಗಿದ್ದು, ಸ್ವತ್ಛ ಭಾರತ್ ಮಿಷನ್ ಹಾಗೂ ಅಮೃತ್ ಯೋಜನೆ ಎರಡನ್ನೂ ಪರಿಗಣಿಸಿ ಹೊಸದಿಲ್ಲಿಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಪುರಸಭೆಯು ವಿಲೇವಾರಿ ಮಾಡಿದ ಕಸವನ್ನು ಹಸಿ ಕಸ, ಒಣ ಕಸವೆಂದು ವಿಂಗಡಿಸಿ ಹಸಿ ಕಸದಿಂದ ಗೊಬ್ಬರ ಮಾಡುವ ವ್ಯವಸ್ಥೆಯನ್ನು ಹೊಂದಿದೆ. ಅದರ ವ್ಯವಸ್ಥೆಯ ಆಧಾರದಲ್ಲಿ ಈ ಆಯ್ಕೆ ನಡೆದಿದೆ ಎಂದು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ತಿಳಿಸಿದ್ದಾರೆ.