Advertisement

ಬಂಟ್ವಾಳ : ಮಿನಿವಿಧಾನ ಸೌಧ ಇಂದು ಲೋಕಾರ್ಪಣೆ

09:45 AM Oct 22, 2017 | Team Udayavani |

ಬಿ.ಸಿ.ರೋಡ್‌: ಬಿ.ಸಿ.ರೋಡ್‌ನಲ್ಲಿ ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕು ಮಿನಿವಿಧಾನಸೌಧವನ್ನು ಅ.22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.

Advertisement

1ನೇ ಹಂತ ಮತ್ತು 2ನೇ ಹಂತದಲ್ಲಿ ಒಟ್ಟು 998 ಲ.ರೂ. ವೆಚ್ಚದಲ್ಲಿ ಈ ಮಿನಿ ವಿಧಾನ ಸೌಧ ನಿರ್ಮಿಸಲಾಗಿದ್ದು, ಪ್ರಮುಖ ಇಲಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸಲಿವೆ. ಈ ಕಟ್ಟಡ ನೆಲ ಅಂತಸ್ತು, 1ನೇ ಅಂತಸ್ತು ಮತ್ತು 2ನೇ ಅಂತಸ್ತು ಸಹಿತ ಒಟ್ಟು 3,225 ಚ.ಮೀ. ವಿಸ್ತೀರ್ಣವನ್ನು ಹೊಂದಿದೆ.

ನೆಲ ಅಂತಸ್ತಿನಲ್ಲಿ ತಹಶೀಲ್ದಾರರ ಕೊಠಡಿ, ತಾಲೂಕು ಕಚೇರಿ, ಮೀಟಿಂಗ್‌ ಹಾಲ್‌, ನಗರ ನೀರು ಸರಬರಾಜು ಒಳಚರಂಡಿ ಇಲಾಖೆ, ಉಪಖಜಾನೆ, 1ನೇ ಮಹಡಿಯಲ್ಲಿ ಕಂದಾಯ ನಿರೀಕ್ಷಕರ ಕೊಠಡಿ, ಉಪನೋಂದಣಾಧಿಕಾರಿ ಕಚೇರಿ, ಭೂಮಿ ಕೇಂದ್ರ, ಇತರ ಅಧೀನ ಕಚೇರಿಗಳು, 2ನೇ ಮಹಡಿಯಲ್ಲಿ ಆಹಾರ ಶಾಖೆ, ಚುನಾವಣಾ ಮೀಟಿಂಗ್‌ ಹಾಲ್‌, ಅಭಿಲೇಖಾಲಯ, ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗಳು ಕಾರ್ಯಾರಂಭಗೊಳ್ಳಲಿವೆ.  ಮಿನಿ ವಿಧಾನಸೌಧವು ವಿಶಾಲ ಪಾರ್ಕಿಂಗ್‌ ವ್ಯವಸ್ಥೆ , ಜನರೇಟರ್‌ ವ್ಯವಸ್ಥೆ , ಲಿಫ್ಟ್‌ ವ್ಯವಸ್ಥೆಯನ್ನು ಹೊಂದಿದೆ. 

ನೂತನ ಪ್ರವಾಸಿ ಮಂದಿರಕ್ಕೆ 3 ಕೋಟಿ ರೂ. ವೆಚ್ಚ
ನೇತ್ರಾವತಿ ನದಿ ಕಿನಾರೆಯ ಪರಿಸರದಲ್ಲಿ ನೂತನ ನಿರೀಕಣ ಮಂದಿರ 3 ಕೋ. ರೂ. ವೆಚ್ಚದಲ್ಲಿ ನಿಮಾರ್ಣವಾಗಿದೆ. ಇದನ್ನು ಕೂಡ ಅ.22ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.

ನೆಲ ಅಂತಸ್ತು ಒಟ್ಟು 660 ಚ.ಮೀ. ವಿಸ್ತೀರ್ಣವಿದ್ದು, 2 ವಿಐಪಿ ಕೊಠಡಿಗಳು, 2 ಸಾಮಾನ್ಯ ಕೊಠಡಿಗಳು, 1 ಮೀಟಿಂಗ್‌ ಹಾಲ್‌, ತಳ ಅಂತಸ್ತು (1)ರಲ್ಲಿ 580 ಚ.ಮೀ.ವಿಸ್ತೀರ್ಣವಿದ್ದು 3 ಸಾಮಾನ್ಯ ಕೊಠಡಿಗಳು, 1 ಅಡುಗೆಕೋಣೆ, 1ಡೈನಿಂಗ್‌ ರೂಂ, ತಳ ಅಂತಸ್ತು (2)ರಲ್ಲಿ 270 ಚ.ಮೀ.ವಿಸ್ತೀರ್ಣದಲ್ಲಿ ಎರಡು ಸಾಮಾನ್ಯ ಕೊಠಡಿ ಹಾಗೂ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ತೀರಾ ಹಳೆಯದಾದ ನಿರೀಕ್ಷಣ ಮಂದಿರದ ಕಟ್ಟಡದ ಬದಲಿಗೆ ನೂತನ ಪ್ರವಾಸಿ ಮಂದಿರ ನಿರ್ಮಾಣವಾಗಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅನುದಾನದಿಂದ 2014-15ನೇ ಸಾಲಿನ ಅಪೆಂಡಿಕ್ಸ್‌ -ಇನಲ್ಲಿ ಸೇರ್ಪಡೆಗೊಳಿಸಿ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿತ್ತು. 2015ರ ಎ. 30ರಂದು ರಾಜ್ಯದ ಲೋಕೋಪಯೋಗಿ ಸಚಿವ ಡಾ| ಎಚ್‌.ಸಿ. ಮಹಾದೇವಪ್ಪ ಅವರಿಂದ ಶಿಲಾನ್ಯಾಸಗೊಂಡಿದ್ದು, ಇದೀಗ ಕಾಮಗಾರಿಯು ಮುಕ್ತಾಯಗೊಂಡಿದೆ. ನಿರೀಕ್ಷಣ ಮಂದಿರದ ಸಮೀಪದಲ್ಲಿ 35ಲಕ್ಷ ರೂ. ವೆಚ್ಚದಲ್ಲಿ ಟ್ರೀಪಾರ್ಕ್‌ ಕೂಡಾ ನಿರ್ಮಿಸಲಾಗಿದೆ.

ಮೇಲ್ದರ್ಜೆಗೇರಿಸಿರುವ ಸರಕಾರಿ ಆಸ್ಪತ್ರೆ
ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳಿಂದ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ್ದು, ಇದು ಕೂಡ ಅ.22ರಂದು ಲೋಕಾರ್ಪಣೆಗೊಳ್ಳಲಿದೆ.

 ಬಂಟ್ವಾಳ ತಾಲೂಕಿನ ಬಂಟ್ವಾಳ ಕಸ್ಬಾ ಗ್ರಾಮದಲ್ಲಿ ಅಂದಾಜು 615.47 ಲ.ರೂ. ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಆಸ್ಪತ್ರೆಯ ನೆಲಮಹಡಿ ಕ್ಯಾಸುವಲ್ಟಿ, ಒಪಿಡಿ, 40 ಬೆಡ್‌ಗಳ ವಾರ್ಡ್‌, ಪ್ರಸೂತಿ ವಿಭಾಗ ಇತ್ಯಾದಿ ಹೊಂದಿದ್ದು, ಮೊದಲನೇ ಮಹಡಿಯಲ್ಲಿ 2 ಶಸ್ತ್ರ ಚಿಕಿತ್ಸಾ ಕೊಠಡಿ, 1 ಬೆಡ್‌ನ‌ 3 ವಿಶೇಷ ವಾರ್ಡ್‌ಗಳು, 2 ಬೆಡ್‌ನ‌ 2 ವಿಶೇಷ ವಾರ್ಡ್‌ಗಳು, 40 ಬೆಡ್‌ಗಳ ಜನರಲ್‌ ವಾರ್ಡ್‌ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ. ಸಿಎಸ್‌ಆರ್‌ ನಿಧಿಗಳಾದ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಚಾರಿಟೇಬಲ್‌ ಟ್ರಸ್ಟ್‌ನಿಂದ 5 ಲ.ರೂ. ವೆಚ್ಚದಲ್ಲಿ ಅಡುಗೆ ಕೋಣೆ, ಎಂಆರ್‌ ಪಿಎಲ್‌ ಸಿಎಸ್‌ಆರ್‌ ನಿಧಿಯಿಂದ 6 ಲ.ರೂ. ವೆಚ್ಚದಲ್ಲಿ ಡಯಾಲಿಸಿಸ್‌ ಸೆಂಟರ್‌, ಎನ್‌ಎಂಪಿಟಿ ಸಿಎಸ್‌ಆರ್‌ ನಿಧಿಯಿಂದ 12 ಲ.ರೂ. ವೆಚ್ಚದಲ್ಲಿ ಹೆಚ್ಚುವರಿ ಶವಾಗಾರ ವ್ಯವಸ್ಥೆಯನ್ನು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next