Advertisement

ಬಂಟ್ವಾಳ ಸರಕಾರಿ ಆಸ್ಪತ್ರೆ: ಲ್ಯಾಬ್‌ ಟೆಕ್ನಿಶಿಯನ್‌ ಕೊರತೆ

05:17 PM Jul 02, 2024 | Team Udayavani |

ಬಂಟ್ವಾಳ: ಬಂಟ್ವಾಳ ಸರಕಾರಿ ಆಸ್ಪತ್ರೆ (ತಾಲೂಕು ಸಾರ್ವಜನಿಕ ಆಸ್ಪತ್ರೆ)ಯಲ್ಲಿ ರೋಗಿಗಳ ಕಾಯಿಲೆ ಪತ್ತೆಗೆ ರಕ್ತ ಪರೀಕ್ಷೆಗೆ ನೀಡಿದರೆ ವರದಿ ಬರುವುದು ತೀರಾ ವಿಳಂಬವಾಗುತ್ತಿದ್ದು, ಹೀಗಾಗಿ ಬೆಳಗ್ಗೆ ಬಂದವರು ಸಂಜೆಯ ವರೆಗೂ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾದು ಕಾದು ವರದಿ ಕೈ ಸೇರುವ ಹೊತ್ತಿಗೆ ರೋಗಿಯನ್ನು ನೋಡಿದ ವೈದ್ಯರು ಹೋಗಿಯಾ ಗಿರುತ್ತದೆ ಎಂಬ ಆರೋಪ ಕೇಳಿಬಂದಿದೆ.

Advertisement

ಸರಕಾರಿ ಆಸ್ಪತ್ರೆಯಲ್ಲಿ ಒಬ್ಬರೇ ಲ್ಯಾಬ್‌ ಟೆಕ್ನಿಶಿಯನ್‌ ಇರುವುದರಿಂದ ಈ ಸಮಸ್ಯೆ ಉಂಟಾಗಿದ್ದು, ಹೆಚ್ಚುವರಿ ಟೆಕ್ನಿಶಿಯನ್‌ ಬೇಕು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದರೂ ಅದರ ಪ್ರಕ್ರಿಯೆಗಳು ಪೂರ್ಣಗೊಂಡು ಟೆಕ್ನಿಶಿಯನ್‌ ಬರುವುದಕ್ಕೆ ಇನ್ನಷ್ಟು ಸಮಯ ತಗಲುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ನಿತ್ಯವೂ ಹತ್ತಾರು ಮಂದಿ ದಿನವಿಡೀ ರಕ್ತ ಪರೀಕ್ಷಾ ಕೇಂದ್ರದ ಮುಂಭಾಗ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ರೋಗಿಗಳು ಬಂದು ರಕ್ತ ಪರೀಕ್ಷೆ ಮಾಡಿಸಿ ಅದರ ವರದಿ ಕೈ ಸೇರಿದ ಬಳಿಕವೂ ವೈದ್ಯರು ಔಷಧ ಸೂಚಿಸುತ್ತಿದ್ದು,
ಒಳರೋಗಿಗಳು ಆಸ್ಪತ್ರೆಯಲ್ಲೇ ಇರುವುದರಿಂದ ದೊಡ್ಡ ಸಮಸ್ಯೆಯಾಗುವುದಿಲ್ಲ. ಆದರೆ ಹೊರರೋಗಿಗಳು ಒಂದು ಗಂಟೆಯಲ್ಲಿ
ಸಿಗುವ ವರದಿಗೆ ದಿನವಿಡೀ ಕಾದು ಅದರ ಬಳಿಕವೇ ಔಷಧ ಪಡೆಯಬೇಕಿದೆ. ಆ ವೇಳೆ ವೈದ್ಯರು ಹೋಗಿದ್ದರೆ ಮರುದಿನ ಮತ್ತೆ
ಬರಬೇಕಾದ ಸ್ಥಿತಿ ಇದೆ.

4 ಮಂದಿಯ ಕೆಲಸ ಒಬ್ಬರಿಂದ
ಬಂಟ್ವಾಳ ಆಸ್ಪತ್ರೆಯಲ್ಲಿ ದಾಖಲೆಯ ಪ್ರಕಾರ ನಾಲ್ಕು ಮಂದಿ ಲ್ಯಾಬ್‌ ಟೆಕ್ನಿಶಿಯನ್‌ ಕೆಲಸ ಮಾಡಬೇಕಿದ್ದು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕೂ ಮಂದಿಯ ಕೆಲಸವನ್ನು ಒಬ್ಬರೇ ನಿರ್ವಹಿಸುತ್ತಿದ್ದಾರೆ. ಒಟ್ಟು 4 ಹುದ್ದೆಗಳಲ್ಲಿ ಒಂದು ಹುದ್ದೆ ಖಾಲಿ
ಇದ್ದು, ಒಬ್ಬರು ಕೆಲಸ ಬಿಟ್ಟು ತೆರಳಿದ್ದಾರೆ. ಇನ್ನೊಬ್ಬರು ತಾಯಿಯ ಅನಾರೋಗ್ಯದ ಕಾರಣಕ್ಕೆ ರಜೆಯಲ್ಲಿ ಊರಿಗೆ ಹೋಗಿದ್ದು,
ಸದ್ಯ ಒಬ್ಬರೇ ಸಿಬಂದಿ ರಕ್ತ ಹಾಗೂ ಇತರ ಪರೀಕ್ಷೆ ಮಾಡಿ ವರದಿ ತಯಾರಿಸಬೇಕಿದೆ.

ರಕ್ತ, ಇತರ ಪರೀಕ್ಷೆಗಳು ಬಹಳ ಸೂಕ್ಷ್ಮ ವಿಚಾರಗಳಾಗಿದ್ದು, ನಾಲ್ಕು ಮಂದಿ ಮಾಡುವ ಕೆಲಸವನ್ನು ಒಬ್ಬರೇ ನಿರ್ವಹಿಸುವುದರಿಂದ ಅವರ ಮೇಲೂ ಒತ್ತಡ ಬೀಳುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ವರದಿಗಳು ಅದಲು-ಬದಲಾಗುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ.

Advertisement

ಡಿಎಚ್‌ಒಗೆ ಪತ್ರ
ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಶೀಘ್ರ ಲ್ಯಾಬ್‌ ಟೆಕ್ನಿಶಿಯನ್‌ ನೀಡುವಂತೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಟೆಕ್ನಿಶಿಯನ್‌ ಹುದ್ದೆಗೆ ಅರ್ಹವಾದ ಅಭ್ಯರ್ಥಿಗಳು ಇದ್ದರೂ, ಸರಕಾರದ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದರಿಂದ ಅವರ ನೇಮಕಾತಿ ಸಾಧ್ಯವಾಗುತ್ತಿಲ್ಲ. ಈ ಕುರಿತು ಬಂಟ್ವಾಳ ಶಾಸಕರ ಗಮನಕ್ಕೂ ತರಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಕೊರತೆಯಿಂದ ಸಾಕಷ್ಟು ತೊಂದರೆ
ಪ್ರಸ್ತುತ ದಿನಗಳಲ್ಲಿ ಒಳರೋಗಿಗಳು, ಐಸಿಯು ರೋಗಿಗಳು ಹೆಚ್ಚಿದ್ದು, ಹೀಗಾಗಿ ಪರೀಕ್ಷೆಗಳು ಕೂಡ ಹೆಚ್ಚಿರುತ್ತದೆ. ಆದರೆ ಲ್ಯಾಬ್‌
ಟೆಕ್ನಿಶಿಯನ್‌ ಕೊರತೆಯಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ವರದಿಗಳು ವಿಳಂಬವಾಗುತ್ತಿರುವುದು ನಿಜ. ಶೀಘ್ರ ಒಬ್ಬರು
ಟೆಕ್ನಿಶಿಯನ್‌ ನೀಡುವಂತೆ ಡಿಎಚ್‌ಒ ಅವರಿಗೆ ಪತ್ರವನ್ನೂ ಬರೆಯಲಾಗಿದೆ.

*ಡಾ| ಪುಷ್ಪಲತಾ, ಆಡಳಿತ ವೈದ್ಯಾಧಿಕಾರಿಗಳು, ಸರಕಾರಿ ಆಸ್ಪತ್ರೆ ಬಂಟ್ವಾಳ

*ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next