Advertisement

Bantwal: ನೀರಕಟ್ಟೆ ಪ್ರದೇಶದ ನದಿ ಕಿನಾರೆಯಲ್ಲಿ ಕಸ ಎಸೆತ

12:52 PM Oct 30, 2024 | Team Udayavani |

ಬಂಟ್ವಾಳ: ಜೀವನದಿ ನೇತ್ರಾವತಿ ನದಿ ಕಿನಾರೆಯ ನಾವೂರು ಗ್ರಾಮದ ನೀರಕಟ್ಟೆ ಪ್ರದೇಶಕ್ಕೆ ಯಾರೋ ಕಸವನ್ನು ತಂದು ಡಂಪ್‌ ಮಾಡುತ್ತಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕಸವು ಮುಂದಿನ ದಿನಗಳಲ್ಲಿ ನದಿಯನ್ನು ಸೇರಿ ನೀರು ಕಲುಷಿತಗೊಳ್ಳುವ ಆತಂಕವೂ ಎದುರಾಗಿದೆ.

Advertisement

ನೀರಕಟ್ಟೆ ಈ ಪ್ರದೇಶವು ಧಾರ್ಮಿಕ ಹಿನ್ನಲೆಯನ್ನು ಹೊಂದಿದ್ದು, ದಂಡತೀರ್ಥ ಎಂದೇ ಪ್ರಸಿದ್ಧಿ ಪಡೆದಿದೆ. ಇಂತಹ ಸ್ಥಳದಲ್ಲಿ ಕಸ ತಂದು ಹಾಕಿ ಧಾರ್ಮಿಕ ಭಾವನೆಗೂ ಧಕ್ಕೆ ತಂದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಈ ಹಿಂದೆಯೂ ಹಲವು ಬಾರಿ ಇಲ್ಲಿಗೆ ಕಸ ತಂದು ಹಾಕಲಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ಕಟ್ಟಡದ ಅವಶೇಷಗಳನ್ನು ವಾಹನದಲ್ಲಿ ತಂದು ನದಿ ಕಿನಾರೆಗೆ ಸುರಿಯಲಾಗಿದೆ. ಕಸದ ಜತೆಗೆ ರಾಷ್ಟ್ರೀಕೃತ ಬ್ಯಾಂಕೊಂದರ ಪತ್ರಗಳು ಕೂಡ ಇದ್ದು, ಹೀಗಾಗಿ ಬ್ಯಾಂಕಿನ ನವೀಕರಣದ ಅವಶೇಷಗಳನ್ನು ತಂದು ಸುರಿಯಲಾಗಿದೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ.

ಪ್ರತಿವರ್ಷ ಸ್ಥಳೀಯ ಗಣೇಶೋತ್ಸವದಲ್ಲಿ ಪೂಜಿತ ವಿಗ್ರಹವನ್ನು ಇದೇ ಸ್ಥಳದಲ್ಲಿ ಜಲಸ್ತಂಭನಗೊಳಿಸಲಾಗುತ್ತಿದ್ದು, ಕಳೆದ ಗಣೇಶ ಚತುರ್ಥಿ ಸಂದರ್ಭ ಸ್ಥಳೀಯ ಯುವಕರು ಈ ಸ್ಥಳವನ್ನು ಸ್ವತ್ಛಗೊಳಿಸಿದ್ದರು. ಇದೀಗ ಮತ್ತೆ ಕಸ ತಂದು ಹಾಕಿ ಮಲಿನಗೊಳಿಸಲಾಗಿದೆ. ವಿಗ್ರಹದ ವಿಸರ್ಜನೆಗೆ ಅನುಕೂಲವಾಗುವ ದೃಷ್ಟಿಯಿಂದ ಇಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ನಿರಂತರವಾಗಿ ಕಸಗಳನ್ನು ತಂದು ಹಾಕುತ್ತಿರುವುದರಿಂದ ಅವುಗಳು ಕೂಡ ಮುಚ್ಚಿ ಹೋಗಿವೆ ಎನ್ನಲಾಗಿದೆ.

ನೀರಕಟ್ಟೆ ಪ್ರದೇಶವು ಸಾಕಷ್ಟು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಎಂಬ ಆರೋಪವಿದ್ದು, ಇಲ್ಲಿ ಅಕ್ರಮ ಮರಳುಗಾರಿಕೆ, ಗಾಂಜಾ ಚಟುವಟಿಕೆಗಳು ಕೂಡ ನಡೆಯುತ್ತಿದೆ. ಸ್ಥಳೀಯವಾಗಿ ಹಿಂದೂ ರುದ್ರಭೂಮಿಯೂ ಇದ್ದು, ಆದರೆ ಅದರ ಸೊತ್ತುಗಳು ಈಗಾಗಲೇ ಕಳವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Advertisement

ಇದೇ ಸ್ಥಳದ ಪಕ್ಕದ ಮೈದಾನ ಸೇತುವೆಯ ಸಮೀಪ ನಿರಂತರವಾಗಿ ಕಸ ಸುರಿಯಲಾಗುತ್ತಿದ್ದು, ಕೆಲವು ಸಮಯಗಳ ಹಿಂದೆ ಅಲ್ಲಿ ಸಿಸಿ ಕೆಮರಾ ಹಾಕಿದ ಸ್ವಲ್ಪ ಸಮಯ ಕಸದ ಸಮಸ್ಯೆಗೆ ತಡೆ ಬಿದ್ದಿತ್ತು. ಆದರೆ ಇದೀಗ ಮತ್ತೆ ಕಸ ತಂದು ಹಾಕುತ್ತಿದ್ದು, ಸ್ಥಳೀಯ ಶ್ರೀ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಠಾರಕ್ಕೂ ಅಕ್ರಮ ಕಸದ ರಾಶಿ ತಲುಪಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಗ್ರಾ.ಪಂ.ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿ ಅಕ್ರಮ ಕಾರ್ಯಗಳನ್ನು ಮಟ್ಟ ಹಾಕುವ ಕಾರ್ಯ ಮಾಡಬೇಕಿದೆ ಎಂಬ ಆಗ್ರಹ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next