ಬಂಟ್ವಾಳ: ಅಕ್ರಮ ಪಾರ್ಸೆಲ್ ವಿಚಾರದಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದು ಮುಂಬಯಿ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಹೆದರಿಸಿ ವೀರಕಂಭದ ವ್ಯಕ್ತಿಯೊಬ್ಬರಿಗೆ 90 ಸಾವಿರ ರೂ. ವಂಚಿಸಿರುವ ಕುರಿತು ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಭದ ಹರ್ಷ ಹೆಗ್ಡೆ ಕೆ. ಅವರು ಹಣ ಕಳೆದುಕೊಂಡ ವ್ಯಕ್ತಿ. ಸೆ. 21ರಂದು ಬೆಳಗ್ಗೆ ಅವರ ಮೊಬೈಲ್‌ಗೆ ಅಪರಿಚಿತನ ಕರೆ ಬಂದಿದ್ದು, ಹಿಂದಿಯಲ್ಲಿ ಮಾತನಾಡಿ ಕೋರಿಯರ್ ಕಂಪೆನಿಯ ಮುಂಬಯಿ ಶಾಖೆಯಿಂದ ಮಾಡುತ್ತಿದ್ದೇವೆ. ನಿಮ್ಮ ಹೆಸರಿನಲ್ಲಿ ಸೆ. 4ರಂದು ಆಧಾರ ಕಾರ್ಡ್ ಬಳಸಿ ಪಾರ್ಸೆಲ್ ಬುಕ್ ಆಗಿದ್ದು, ಅದರಲ್ಲಿ ಅಕ್ರಮ ಸಾಮಗ್ರಿ, ನಗದು ಇದೆ. ನಿಮ್ಮ ವಿರುದ್ಧ ಮುಂಬಯಿ ಪೊಲೀಸರು ಪ್ರಕರಣ ದಾಖಲಿಸಿದ್ದು, ನಿಮಗೆ ಅವರ ಕರೆ ಬರುತ್ತದೆ ಎಂದಿದ್ದ.
ಬಳಿಕ ಅವರಿಗೆ ವಾಟ್ಸಾಪ್ ಕಾಲ್ ಬಂದಿದ್ದು, ಅವರು ಅಂಧೇರಿ ಸಬ್‌ಇನ್ಸ್‌ಪೆಕ್ಟರ್ ಎಂಬ ಐಡಿಯನ್ನು ಕಳುಹಿಸಿ ಪ್ರಕರಣದ ಕುರಿತು ವಿಚಾರಣೆ ನಡೆಸಿ ಆಧಾರ್ ಕಾರ್ಡ್ ವಾಟ್ಸಾಪ್ ಮಾಡುವಂತೆ ಹೇಳಿದ್ದಾರೆ. ಜತೆಗೆ ನಿಮ್ಮ ಮೇಲೆ ಪ್ರಕರಣ ದಾಖಲಾಗಿ ಅರೆಸ್ಟ್ ವಾರೆಂಟ್ ಕೂಡ ಆಗಿದ್ದು, ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದ್ದರು.
ನಿಮ್ಮ ವಾಟ್ಸಾಪ್‌ಗೆ ಪತ್ರವೊಂದನ್ನು ಕಳುಹಿಸಲಾಗಿದ್ದು, ನಿಮ್ಮ ಖಾತೆಯಿಂದ ಅದರಲ್ಲಿರುವ ರುಕ್ಮಾದೇವಿ ಹೆಸರಿಗೆ 15 ಸಾವಿರ ರೂ. ಕಳುಹಿಸಿ. ಈ ಹಣವನ್ನು 4 ದಿನದಲ್ಲಿ ನಿಮಗೆ ಹಿಂದಿರುಗಿಸಲಾಗುತ್ತದೆ ಎಂದು ಹೇಳಿದ್ದರು.
ಅದರಂತೆ ಅವರು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಮತ್ತೊಂದು ವಾಟ್ಸಾಪ್ ಕರೆ ಮಾಡಿ ನಿಮಗೆ ಬೇಲ್ ಬಾಂಡ್ ತೆಗೆಯಲು 75 ಸಾವಿರ ರೂ. ಕಳುಹಿಸಬೇಕಿದ್ದು, ನಿಮ್ಮ ಮೇಲಿನ ಪ್ರಕರಣ ಖುಲಾಸೆಯಾದ ಬಳಿಕ ಈ ಹಣವು ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ ಎಂದು ಪತ್ರವೊಂದನ್ನು ಕಳುಹಿಸಿದ್ದರು. ಅವರು ಈ ಹಣವನ್ನೂ ವರ್ಗಾವಣೆ ಮಾಡಿದ್ದು, ಹೀಗೆ ಎರಡು ಪ್ರತ್ಯೇಕ ಖಾತೆಗಳಿಗೆ 90 ಸಾವಿರ ರೂ. ವರ್ಗಾಯಿಸಿ ವಂಚನೆಗೊಳಗಾಗಿರುವುದಾಗಿ ದೂರು ನೀಡಿದ್ದಾರೆ.