Advertisement

Bantwal: ಬೊಂಡಾಲ ಹಾಸ್ಟೆಲ್‌ ಕೊನೆಗೂ ಸಿದ್ಧ

04:24 PM Aug 30, 2024 | Team Udayavani |

ಬಂಟ್ವಾಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಡಬ್ಲ್ಯುಡಿ)ಯ ಮೂಲಕ ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ ಸುಮಾರು 2 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಲಕಿಯರ ಹಾಸ್ಟೆಲ್‌ ಕಟ್ಟಡ ಕಾಮಗಾರಿಯು ಹಲವು ಕಾರಣಕ್ಕೆ ಕುಂಟುತ್ತಾ ಸಾಗಿ ಇದೀಗ ಕೊನೆಗೂ ಅಂತಿಮ ಹಂತಕ್ಕೆ ತಲುಪಿದ್ದು, ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

Advertisement

ಇಲಾಖೆಯ ಬೊಂಡಾಲದ ನಿವೇಶನದಲ್ಲಿ 2020ರಲ್ಲಿ ಹಾಸ್ಟೆಲ್‌ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಜಾಗದ ಸಮತಟ್ಟಿನ ವಿಚಾರಕ್ಕೆ ಸಂಬಂಧಿಸಿ ಪ್ರಾರಂಭದಲ್ಲೇ ಕಾಮಗಾರಿ ವಿಳಂಬವಾಗಿತ್ತು. ಕಟ್ಟಡದ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದ ನಿರ್ಮಿತಿ ಕೇಂದ್ರದ ಮಾಹಿತಿ ಪ್ರಕಾರ ಕಟ್ಟಡ ನಿರ್ಮಾ ಣಕ್ಕೆ ಹೆಚ್ಚಿನ ಅನುದಾನದ ಅಗತ್ಯತೆ ಎದುರಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಅದರ ಮಂಜೂರಾತಿ ವಿಳಂಬವಾದ ಕಾರಣ ಕಾಮಗಾರಿಯೂ ವಿಳಂಬವಾಗಿತ್ತು.

ಎಸ್ಟಿಮೇಟ್‌ನಲ್ಲಿಲ್ಲದ ಬಂಡೆ!
ನಿವೇಶನದ ಮಧ್ಯೆ ಇದ್ದ ಬೃಹತ್‌ ಬಂಡೆ ಕಲ್ಲನ್ನು ತೆರವು ಮಾಡುವುದಕ್ಕೆ ಹೆಚ್ಚಿನ ಮೊತ್ತ ತಗಲಿದ್ದು, ಅದಕ್ಕಾಗಿ ಕಟ್ಟಡಕ್ಕೆ ಮಂಜೂರಾದ ಮೊತ್ತವನ್ನೇ ಬಳಸಿಕೊಳ್ಳಲಾಗಿತ್ತು. ಅಂದರೆ ಬಂಡೆಕಲ್ಲು ಒಡೆಯುವ ಮೊತ್ತ ಎಸ್ಟಿಮೇಟ್‌ನಲ್ಲಿ ಒಳಗೊಳ್ಳದ ಪರಿಣಾಮ ಹೆಚ್ಚುವರಿ ಮೊತ್ತದ ಅನಿವಾರ್ಯತೆ ಎದುರಾಗಿತ್ತು.

ಸದ್ಯಕ್ಕೆ ಇದು ಹುಡುಗರ ಹಾಸ್ಟೆಲ್‌
ಪಾಣೆಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ದೇವರಾಜ ಅರಸು ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ಗೆ ಪೂರಕವಾಗಿ ಈ ಕಟ್ಟಡ ನಿರ್ಮಾಣವಾಗಿದೆ. ಇದರಲ್ಲಿ 150 ಮಂದಿ ವಾಸ ಮಾಡಬಹುದು. ಆದರೆ, ಸದ್ಯಕ್ಕೆ ಈ ಕಟ್ಟಡಕ್ಕೆ ಬಾಲಕಿಯರ ಹಾಸ್ಟೆಲ್‌ ಸ್ಥಳಾಂತರಗೊಳ್ಳುತ್ತಿಲ್ಲ. ಬದಲಾಗಿ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ನ 50 ಮಂದಿ ಬಾಲಕರಿಗೆ ಇಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

ತಿಂಗಳೊಳಗೆ ಪೂರ್ಣಕ್ಕೆ ಸೂಚನೆ
ಹಲವು ಕಾರಣಕ್ಕೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಕಳೆದ ಎಪ್ರಿಲ್‌-ಮೇ ತಿಂಗಳಲ್ಲಿ ಪೂರ್ಣಗೊಳಿಸಿ ಜೂನ್‌ ತಿಂಗಳಿ ನಲ್ಲಿ ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್‌ ಕಟ್ಟಡದ ನೀಡುವ ಆಲೋಚನೆ ಇತ್ತು. ಪ್ರಸ್ತುತ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡು ತಿಂಗಳೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ.
-ಬಿಂದಿಯಾ ನಾಯಕ್‌,ತಾ| ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಂಟ್ವಾಳ

Advertisement

ಎರಡು ಅಂತಸ್ತುಗಳ ಕಟ್ಟಡ
ಒಟ್ಟು 7500 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಂಡಿದ್ದು, ಸ್ಥಳಾವಕಾಶದ ದೃಷ್ಟಿಯಿಂದ ಇಲಾಖೆಯು ಒಂದು ಅಂತಸ್ತಿನ ಕಟ್ಟಡ(ಜಿ ಪ್ಲಸ್‌ ವನ್‌) ನಿರ್ಮಿಸುವಂತೆ ಪ್ರಾರಂಭದಲ್ಲೇ ಸಂಬಂಧಪಟ್ಟ ಎಂಜಿನಿಯರಿಂಗ್‌ ವಿಭಾಗಕ್ಕೆ ಮನವಿ ಮಾಡಿತ್ತು. 2 ಕೋ.ರೂ.ಮಂಜೂರಾತಿಯ ಜತೆಗೆ ಹೆಚ್ಚುವರಿಯಾಗಿ ಇನ್ನೊಂದು ಕೋ.ರೂ.ಗಳಿಗೂ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇಲಾಖೆಗೆ ಈ ಭಾಗದಲ್ಲಿ ಸದ್ಯ ಒಂದು ಎಕರೆ ಪ್ರದೇಶ ಮಾತ್ರ ಲಭ್ಯವಿರುವುದರಿಂದ ಕಡಿಮೆ ಸ್ಥಳದಲ್ಲಿ ಒಂದು ಹಾಸ್ಟೆಲ್‌ ನಿರ್ಮಾಣಗೊಂಡರೆ, ಉಳಿದ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಮತ್ತೂಂದು ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜಿ ಪ್ಲಸ್‌ ವನ್‌ ಕಟ್ಟಡಕ್ಕೆ ಆದ್ಯತೆ ನೀಡಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next