Advertisement

ಬಂಟ್ವಾಳ, ಬೆಳ್ತಂಗಡಿ, ವಿಟ್ಲ  : ಕೇರಳ ಸಿಎಂ ವಿರುದ್ಧ ಹರತಾಳ ಯಶಸ್ವಿ

01:18 PM Feb 26, 2017 | Team Udayavani |

ಬಂಟ್ವಾಳ/ಬೆಳ್ತಂಗಡಿ/ವಿಟ್ಲ/ಪುಂಜಾಲಕಟ್ಟೆ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಂಗಳೂರಿನ ಕೋಮು ಸೌಹಾರ್ದ ರ್ಯಾಲಿಗೆ ಆಗಮಿಸುವುದನ್ನು ವಿರೋಧಿಸಿ ಸಂಘ ಪರಿವಾರದ ಸಂಘಟನೆಗಳು ಶನಿವಾರ ದ.ಕ. ಜಿಲ್ಲಾ ಹರತಾಳಕ್ಕೆ ನೀಡಿದ ಕರೆಗೆ ಬಂಟ್ವಾಳ, ವಿಟ್ಲ ಮತ್ತು ಬೆಳ್ತಂಗಡಿ ಪರಿಸರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೆಚ್ಚಿನ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಖಾಸಗಿ ಬಸ್‌ಗಳ ಓಡಾಟ ನಿಂತಿತ್ತು. ಜನಸಂಚಾರ ಭಾರೀ ವಿರಳವಾಗಿತ್ತು. ಹರತಾಳ  ಯಶಸ್ವಿಯಾಗಿ ನಡೆಯಿತು.

Advertisement

ಬಂಟ್ವಾಳ ತಾಲೂಕಿನಲ್ಲಿ ಖಾಸಗಿ ಬಸ್‌ ಸಂಚಾರ ಸಂಪೂರ್ಣ ನಿಲುಗಡೆ ಆಗಿತ್ತು. ನಗರದಲ್ಲಿ ಬಹುತೇಕ ಅಂಗಡಿ, ಹೋಟೆಲ್‌, ಸಹಕಾರಿ ಸಂಸ್ಥೆಗಳು ಬಾಗಿಲು ಹಾಕಿದ್ದವು. ನಗರದ್ಯಾಂತ ಶಾಂತ ವಾತಾವರಣವಿತ್ತು. ಅಟೋರಿಕ್ಷಾ ಮತ್ತು ಸರ್ವಿಸ್‌ ವಾಹನಗಳ ಸಂಖ್ಯೆ ವಿರಳವಾಗಿತ್ತು. ಜನ ಮತ್ತು ವಾಹನ ನಿಬಿಡ ಬಿ.ಸಿ.ರೋಡ್‌ ಹೆದ್ದಾರಿ ಅಲ್ಪ ಚಟುವಟಿಕೆಯಲ್ಲಿತ್ತು. ಬ್ಯಾಂಕ್‌, ಎಲ್ಲೆ„ಸಿ, ಅರೆ ಸರಕಾರಿ ಸಂಸ್ಥೆಗಳು ಅರ್ಧ ಬಾಗಿಲು ತೆರೆದು ಕಚೇರಿ ವ್ಯವಹಾರ ನಡೆಸಿದವು.

ನಗರ ಸ್ತಬ್ಧ
ಮುಂಜಾನೆ ಕೆಲವೊಂದು ಲಾರಿ, ಟ್ಯಾಂಕರ್‌, ಸರಕಾರಿ ಬಸ್‌ಗಳು ಸಂಚರಿಸಿದ್ದವು. ಕೆಲವೆಡೆ ಕಲ್ಲೆಸೆತದ ಮಾಹಿತಿ ಬರುತ್ತಿದ್ದಂತೆ ಏರು ಹೊತ್ತಿನ ಬಳಿಕ ಸಂಚಾರ ನಿಲುಗಡೆ ಆಗಿದೆ.  ಸಾಮಾನ್ಯ ದಿನಗಳಲ್ಲಿ ಜನ ಸಂಚಾರದಿಂದ ಗಿಜಿಗುಡುತ್ತಿದ್ದ ಬಿ.ಸಿ.ರೋಡ್‌ ಬಸ್‌ ನಿಲ್ದಾಣ ಬೆಳಗ್ಗಿನಿಂದಲೇ ನಿರ್ಜನವಾಗಿತ್ತು. ಒಂದೆರಡು ರಿಕ್ಷಾಗಳು ಬಿಟ್ಟರೆ ಬಹುತೇಕ ಬಿಕೋ ಎನ್ನುವಂತಿತ್ತು. ಮಧ್ಯಾಹ್ನದ ಹೊತ್ತಿಗೆ ಯಾವುದೇ ವಾಹನ ಸಂಚಾರ ಇಲ್ಲದೆ ನಗರ ಸ್ತಬ್ದಗೊಂಡಿತ್ತು.
ಬಿ.ಸಿ.ರೋಡ್‌ ನಗರ, ಬಂಟ್ವಾಳ ಪೇಟೆ, ಕಲ್ಲಡ್ಕ, ಮೆಲ್ಕಾರ್‌, ಸಿದ್ದಕಟ್ಟೆ, ಪುಂಜಾಲಕಟ್ಟೆ, ಮಾಣಿಯಲ್ಲಿ ಹರತಾಳ ಯಶಸ್ವಿ ಆಗಿದೆ. ಫರಂಗಿಪೇಟೆ, ಪಾಣೆಮಂಗಳೂರು, ಮಂಚಿಕುಕ್ಕಾಜೆ, ಜೋಡುಮಾರ್ಗ ಕೈಕಂಬ, ಕಾವಳಪಡೂರು, ವಾಮದಪದವು ಸಹಿತ ಗ್ರಾಮಾಂತರ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಹರತಾಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ವಿದ್ಯಾರ್ಥಿಗಳ ಗೋಳು 
ಸ್ಥಳೀಯ ಶಾಲಾ ಕಾಲೇಜುಗಳಿಗೆ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳ ಗೈರು ಹಾಜರಿಯ ಹಿನ್ನೆಲೆಯಲ್ಲಿ ತರಗತಿ ನಡೆಸಲಾಗಿಲ್ಲ. ಪ್ರೌಢಶಾಲೆಗಳು ಸಾಂದರ್ಭಿಕ ರಜೆಯನ್ನು ನೀಡಿದ್ದವು. ಆದರೆ ಪ್ರಥಮ ಪಿಯು ಸಯನ್ಸ್‌ ವಿಭಾಗದ ಗಣಿತ ಪರೀಕ್ಷೆ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಧಾವಂತದಿಂದ ಕಾಯುವುದು ಮತ್ತು ಅನೇಕ ಮಂದಿ ದ್ವಿಚಕ್ರ ವಾಹನಕ್ಕೆ ಕೈಹಿಡಿದು ಲಿಫ್ಟ್ ಕೇಳುತ್ತಿರುವುದು ಕಂಡುಬಂತು.

ಕಲ್ಲೆಸೆತ-ಟಯರ್‌ಗೆ ಬೆಂಕಿ
ಕಲ್ಲಡ್ಕ ಮುಖ್ಯ ರಸ್ತೆ, ಕೆ.ಸಿ.ರೋಡ್‌ನ‌ಲ್ಲಿ ಮುಂಜಾನೆ ಹೆದ್ದಾರಿಯಲ್ಲಿ ಟಯರ್‌ ಇಟ್ಟು ಬೆಂಕಿ ಹಾಕಿದ್ದು ಗಸ್ತಿನಲ್ಲಿದ್ದ ಪೊಲೀಸರು ಅದನ್ನು ನಂದಿಸಿದರು. ಬ್ರಹ್ಮರಕೂಟ್ಲು , ಮಾರಿಪಳ್ಳ ಮತ್ತು ಕಲ್ಲಡ್ಕದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆತದಿಂದ ಹಾನಿಯಾದ ಬಗ್ಗೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ  ದೂರು ದಾಖಲಾಗಿದೆ.

Advertisement

ಬಿಗಿ ಬಂದೋಬಸ್ತ್
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ತಡೆ ಆಗಬಾರದು,ಎಂಬ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕೆಮರಾ ಕಣ್ಗಾವಲು ಇಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳೇ ರಸ್ತೆಗಳಿದು ಗಸ್ತಿನಲ್ಲಿ ಪಾಲ್ಗೊಂಡಿದ್ದರು. ಅಲ್ಲಲ್ಲಿ ರಸ್ತೆ ಬದಿ ಪೊಲೀಸ್‌ ಬೀಟ್‌, ಬ್ಯಾರಿಕೇಡ್‌ ಅಳವಡಿಸಿದ್ದು ಹೆದ್ದಾರಿಯಲ್ಲಿ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಪೊಲೀಸರು ನೋಡಿಕೊಂಡಿದ್ದಾರೆ.

ಇದೇ ಸಂದರ್ಭ ಐಜಿಪಿ ಹರಿಶೇಖರನ್‌, ಎಸ್‌ಪಿ ಗುಲಾಬ್‌ ಜಿ. ಬೊರಸೆ ಬಂಟ್ವಾಳ ನಗರ ಠಾಣೆಗೆ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಬಗ್ಗೆ ಕಿರಿಯ ಅಧಿಕಾರಿಗಳು, ಸಿಬಂದಿಗಳಿಗೆ ಸೂಚನೆ ನೀಡಿದ್ದಲ್ಲದೆ ಹೆದ್ದಾರಿ ಗಸ್ತಿನ ಪರಾಮರ್ಶೆ ನಡೆಸಿದರು.

ಗ್ರಾಮಾಂತರದಲ್ಲೂ ಯಶಸ್ವಿ 
ಬಂಟ್ವಾಳ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಹರತಾಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಯಶಸ್ವಿಯಾಗಿದೆ. ಪುಂಜಾಲಕಟ್ಟೆ , ವಾಮದಪದವು, ಸಿದ್ಧಕಟ್ಟೆ, ಸರಪಾಡಿ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತ ಬಂದ್‌ ಆಚರಿಸಿದವು. ಖಾಸಗಿ ಬಸ್‌ ಸಂಚಾರವಿರಲಿಲ್ಲ. ಜನ ಸಂಚಾರವೂ ವಿರಳವಾಗಿತ್ತು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು.

ಬೆಳ್ತಂಗಡಿಯಲ್ಲಿಯೂ ಬೆಂಬಲ 
ಬೆಳ್ತಂಗಡಿ, ಗುರುವಾಯನಕೆರೆ, ಉಜಿರೆಯಲ್ಲಿ ಹೋಟೆಲ್‌, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.  ಖಾಸಗಿ ಬಸ್‌ಗಳ ಓಡಾಟ ಇರಲಿಲ್ಲ. ಸರಕಾರಿ ಬಸ್‌ಗಳ ಓಡಾಟ ಇದ್ದರೂ ಪೇಟೆಯಲ್ಲಿ ಜನ ಸಂಚಾರ ಇರಲಿಲ್ಲ. ಸರಕಾರಿ  ಕಚೇರಿಗಳು ತೆರೆದಿದ್ದರೂ ಜನಸಾಮಾನ್ಯರೇ ಇರಲಿಲ್ಲ. ಬ್ಯಾಂಕ್‌ಗಳಿಗೆ ಹೇಗೂ 4ನೇ ಶನಿವಾರದ ರಜೆ ಇತ್ತು. ಖಾಸಗಿ ವಾಹನಗಳ ಓಡಾಟಕ್ಕೆ ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಅಹಿತಕರ ಘಟನೆಗಳು ನಡೆಯಲಿಲ್ಲ.  ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next