ಮುಂಬಯಿ: ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸನ್ನದ್ಧವಾದ ಬಂಟರ ಸಂಘವು ಕೋವಿಡ್ ಪೀಡಿತರ ರಕ್ಷಣೆಗಾಗಿ ಅಲ್ಲಲ್ಲಿ ರಕ್ತದಾನ ಶಿಬಿರ, ಕೋವಿಡ್ ಲಸಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ತಿಳಿಸಿದರು.
ಎ. 4ರಂದು ಬೊರಿವಲಿ ಪಶ್ಚಿಮದ ನ್ಯೂಲಿಂಕ್ ರೋಡ್‌ನಲ್ಲಿನ ಲಿಂಕ್ ವೀವ್ಸ್ ಹೊಟೇಲ್‌ನಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಸಂಘದ ಬಂಟ್ಸ್ ಹೆಲ್ತ್ ಸೆಂಟರ್‌ನ ಕಾರ್ಯಾಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಅವರ ಮಾರ್ಗದರ್ಶನದೊಂದಿಗೆ ಸಂಘದ ಪೂರ್ವ, ಪಶ್ಚಿಮ ಮತ್ತು ಮಧ್ಯ ಮುಂಬಯಿ ಪ್ರಾದೇಶಿಕ ಸಮಿತಿಗಳ ಸಮನ್ವಯಕರ ಸಹಕಾರ ಹಾಗೂ ಜೋಗೇಶ್ವರಿ-ದಹಿಸರ್, ಅಂಧೇರಿ-ಬಾಂದ್ರಾ, ಡೊಂಬಿವಲಿ, ಭಿವಂಡಿ -ಬದ್ಲಾಪುರ, ವಸಾಯಿ-ಡಹಾಣು, ಸಿಟಿ, ನವಿ ಮುಂಬಯಿ, ಕುರ್ಲಾ-ಭಾಂಡೂಪ್, ಮೀರಾ-ಭಾಯಂದರ್ ವಿವಿಧ ಪ್ರಾದೇಶಿಕ ವಿಭಾಗೀಯ ಸಮಿತಿಗಳ, ಮಹಿಳಾ ಮತ್ತು ಯುವ ವಿಭಾಗಗಳ ಪದಾಧಿಕಾರಿಗಳು, ಸದಸ್ಯರ ಸಹಯೋಗದೊಂದಿಗೆ ಶೀಘ್ರದಲ್ಲೇ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದೇವೆ. ಸಂಸದ ಗೋಪಾಲ್ ಸಿ. ಶೆಟ್ಟಿ ಮತ್ತು ಬಂಟರ ಸಂಘದ ನೂತನ ಶೈಕ್ಷಣಿಕ ಯೋಜನ ಸಮಿತಿಯ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಅವರು ಸ್ವಸ್ಥ ಸಮಾಜದ ಕಾರ್ಯಕ್ರಮಕ್ಕೆ ನಮಗೆ ಪ್ರೇರಕರಾಗಿದ್ದಾರೆ ಎಂದರು.
ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯದ ಕಾಳಜಿ ಅತ್ಯಗತ್ಯವಾಗಿದೆ. ಪ್ರತಿಯೊಂದು ಪ್ರಾದೇಶಿಕ ಸಮಿತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ನಮ್ಮಲ್ಲಿ ಅನೇಕ ಅಸಹಾಯಕ, ಅಂಗವಿಕಲ ಜನರಿದ್ದು, ಅವರನ್ನು ಮನೆಯಿಂದ ವಾಹನದ ವ್ಯವಸ್ಥೆ ಮಾಡಿ ಕರೆತಂದು ಧರ್ಮಾರ್ಥವಾಗಿ ಇಂತಹ ಆರೋಗ್ಯ ಭಾಗ್ಯ ಸೇವೆ ನೀಡುತ್ತಿದ್ದೇವೆ. ಅತ್ಯವಶ್ಯವುಳ್ಳವರ ಮನೆ ಬಾಗಿಲಿಗೆ ಹೋಗಿ ಇತರ ಸೇವೆಗಳನ್ನು ಬಂಟ್ಸ್ ಸಂಘ ಒದಗಿಸುತ್ತಿದೆ. ಈಗಾಗಲೇ ಸಂಘದ ಯುವ ವಿಭಾಗವು ಭಾಂಡೂಪ್‌ನ ಡಾ| ರತ್ನಾಕರ್ ಶೆಟ್ಟಿ ಅವರ ಆಸ್ಪತ್ರೆಯಲ್ಲಿ ಹೊಂದಾಣಿಕೆ ಮಾಡಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಕೋವಿಡ್ ಲಸಿಕೆ ಪಡೆಯುವಲ್ಲಿ ಬಹುತೇಕರಿಗೆ ಸೂಕ್ತ ಮಾಹಿತಿಯಿಲ್ಲದ ಕಾರಣ ಯುವ ವಿಭಾಗದವರೇ ಸಂಬಂಧಿತರ ಮಾಹಿತಿಗಳನ್ನು ಕಲೆಹಾಕಿ ದಾಖಲೆ ಸಹಿತ ನೋಂದಣಿ ಮಾಡಿಸಿಕೊಂಡು ಲಸಿಕಿ ಹಾಕಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಆದಷ್ಟು ಬೇಗ ಲಸಿಕೆ ಹಾಕಿಸಿಕೊಂಡು ಸಮಾಜವನ್ನು ಆರೋಗ್ಯವಾಗಿಸಲು ಎಲ್ಲರೂ ಸ್ಪಂದಿಸಬೇಕು ಎಂದು ಅವರು ಕರೆ ನೀಡಿದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ ಮಾತನಾಡಿ, ಕೋವಿಡ್ ಆರಂಭದ ದಿನಗಳಿಂದಲೇ ಬಂಟರ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಸೇವೆ ಅನುಪಮವಾದುದು. ಸೆವೆನ್ ಹಿಲ್ಸ್ ಆಸ್ಪತ್ರೆಯ ಸಿಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್ ಇನ್ನಿತರ ಸೇವೆಗಳನ್ನು ಒದಗಿಸಿದೆ. ತೀರಾ ಬಡ ಜನತೆ ಮಾತ್ರವಲ್ಲ ಅತ್ಯವಶ್ಯವುಳ್ಳ ಜನರಿಗೂ ಆ ದಿನಗಳಲ್ಲಿ ವಿವಿಧ ಸೇವೆಗಳನ್ನಿತ್ತು ಸ್ಪಂದಿಸಿದೆ. ಬಂಟ್ಸ್ ಸಂಘವು ಯಾವುದೇ ಜಾತಿ, ಧರ್ಮವನ್ನು ಕಾಣದೆ ಎಲ್ಲರನ್ನೂ ಸಮಾನವಾಗಿಸಿ ಕಾರ್ಯಕ್ರಮ ನಡೆಸಲಿದೆೆ. ಶೀಘ್ರವಾಗಿ ಕೋವಿಡ್ ಮುಕ್ತ ಸಮಾಜ ನಿರ್ಮಾಣವೇ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ, ಮೆಡಿಕಲ್ ಸಮಿತಿ ಕಾರ್ಯಾಧ್ಯಕ್ಷ ನಾಗರಾಜ್ ಶೆಟ್ಟಿ, ಸಂಘಟಕ ರವೀಂದ್ರ ಎಸ್. ಶೆಟ್ಟಿ ಅವರು ರಕ್ತದಾನ ಶಿಬಿರದ ಮಹತ್ವ ಮತ್ತು ಅಗತ್ಯವನ್ನು ತಿಳಿಸಿದರು. ಬಂಟರ ಸಂಘದ ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಬಂಟ್ಸ್ ಸಂಘದ ಸ್ಥಿರಾಸ್ತಿ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ವಿಟ್ಠಲ್ ಎಸ್. ಆಳ್ವ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ವಿಜಯ ಆರ್. ಭಂಡಾರಿ, ಸುರೇಶ್ ಶೆಟ್ಟಿ, ಪ್ರಕಾಶ್ ಎ. ಶೆಟ್ಟಿ ಎಲ್‌ಐಸಿ, ರಘುನಾಥ್ ಎನ್. ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಕಾರ್ತಿಕ್ ಶೆಟ್ಟಿ ಎರ್ಮಾಳ್ ಮತ್ತಿತರರಿದರು.
ಕೋವಿಡ್ ಸಾಂಕ್ರಾಮಿಕದಿಂದ ಮುಕ್ತರಾಗಲು ಜನರು ಸ್ವತಃ ಎಚ್ಚರಿಕೆಯಿಂದ ಇರಬೇಕು. ಎಲ್ಲವೂ ಸರಕಾರ, ಜನಪ್ರತಿನಿಧಿಗಳ ಜವಾಬ್ದಾರಿ ಎನ್ನುವುದು ಸಮಂಜಸವಲ್ಲ. ನಾವು ಸೇವಕರಾಗಿ ಸಂಸದ ಗೋಪಾಲ ಶೆಟ್ಟಿ ಅವರಂತಹ ಜನಪ್ರತಿನಿಧಿಗಳ ಸಕ್ರಿಯ ಬೆಂಬಲದೊಂದಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸರಿಯಾದ ಮಾಹಿತಿಯೊಂದಿಗೆ ನಾಗರಿಕರನ್ನು ಸಶಕ್ತಗೊಳಿಸಬಹುದು. ವೈರಸ್ ಹರಡುವುದನ್ನು ತಡೆಗಟ್ಟಲು ಜನರು ಸ್ವಯಂಪ್ರೇರಿತರಾಗಿ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಬಂಟ್ಸ್ ಸಂಘ, ಬಿಲ್ಲವರ ಅಸೋಸಿಯೇಶನ್, ಆಹಾರ್‌ನಂತಹ ಸಂಸ್ಥೆಗಳ ಸೇವೆ ಪ್ರಶಂಸನೀಯ.
–ಎರ್ಮಾಳ್ ಹರೀಶ್ ಶೆಟ್ಟಿ , ಸಮಾಜ ಸೇವಕರು, ಸಂಘಟಕರು
–ಚಿತ್ರ – ವರದಿ: ರೋನ್ಸ್ ಬಂಟ್ವಾಳ್