Advertisement

ಅ.16ಕ್ಕೆ ಬನ್ನಿ ಬಂಗಾರ, ಉತ್ತರ ಕರ್ನಾಟಕದ ಸಾಂಸ್ಕೃತಿಕ ಉತ್ಸವ : ಮುರುಗೇಶ್ ಜವಳಿ

07:06 PM Oct 12, 2021 | Team Udayavani |

ಬೆಂಗಳೂರು: ಅಕ್ಟೋಬರ್ 16 ರಂದು ಶನಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತದಲ್ಲಿ ಬನ್ನಿ ಬಂಗಾರ ಮತ್ತು ಉತ್ತರ ಕರ್ನಾಟಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ  ಎಂದು ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಮುರುಗೇಶ್ ಜವಳಿ ಹೇಳಿದ್ದಾರೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಧಾನಿ ಬೆಂಗಳೂರಿಗೆ ಉತ್ತರ ಕರ್ನಾಟಕ ಭಾಗದಿಂದ ಉದ್ಯೋಗ ಅರಸಿ ಇಲ್ಲಿ ಬಂದು ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಜನರು ಅಲ್ಲಿನ ಸಾಂಸ್ಕೃತಿ ಹಬ್ಬಗಳನ್ನು ಮಾಡುತ್ತ ರಾಜಧಾನಿಯಲ್ಲಿಯೂ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಇಲ್ಲಿನ ಜನರೊಂದಿಗೆ ಹಂಚಿಕೊಂಡು ಹೋಗುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ.

ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದ ಜನರು ಒಂದೆಡೆ ಸೇರಲು 28 ವರ್ಷಗಳ ಹಿಂದೆ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ ಸ್ಥಾಪನೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ.

ಅನೇಕ ಉತ್ತರ ಕರ್ನಾಟಕ ಭಾಗದ ಹಿರಿಯರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿಕೊಡು ಬಂದಿದ್ದಾರೆ. ಉತ್ತರ ಕರ್ನಾಟಕ ಭಾಗದ ಹಬ್ಬಗಳಾದ ರೊಟ್ಟಿ ಪಂಚಮಿ, ಬನ್ನಿ ಬಂಗಾರ ಹಬ್ಬಗಳನ್ನು ನಿರಂತರವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ನಮ್ಮ ಉತ್ತರ ಕರ್ನಾಟಕ ನಾಗರೀಕರ ಅಭಿವೃದ್ದಿ ಸಂಘದ ನೇತೃತ್ವದಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ವರ್ಷದ ಬನ್ನಿ ಬಂಗಾರ ಹಾಗೂ ಉತ್ತರ ಕರ್ನಾಟಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

Advertisement

ಅಂದು ಸಂಜೆ 4 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮವನ್ನು ನಮ್ಮ ಉತ್ತರ ಕರ್ನಾಟಕ ಭಾಗದವರೇ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. ವಿಧಾನ ಪರಿಷತ್ತಿನ ಸಭಾಧ್ಯಕ್ಷರುವ ಬಸವರಾಜ್ ಹೊರಟ್ಟಿ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರ ಕರ್ನಾಟಕ ನಾಗರೀಕ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಮುರುಗೇಶ್ ಜವಳಿ ಅವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಲ ಸಂಪನ್ಮೂಲ ಸಚಿವರಾಗಿರುವ ಗೋವಿಂದ ಕಾರಜೋಳ , ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಜವಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಬಿಡಿಎ ಅಧ್ಯಕ್ಷರು ಹಾಗೂ ಯಲಹಂಕ.ಶಾಸಕ ಎಸ್.ಆರ್. ವಿಶ್ವನಾಥ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರು ಪಾಲ್ಗೊಳ್ಳಲಿದ್ದಾರೆ.

ಅಂದು ಉತ್ತರ ಕರ್ನಾಟಕ ಭಾಗದ ಕರಡಿ ಮಜಲು ಹಾಗೂ ಡೊಳ್ಳು ಕುಣಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಮುರುಗೇಶ್ ಜವಳಿ, ಉಪಾಧ್ಯಕ್ಷರಾದ ಕಲ್ಲಪ್ಪ ಕಲ್ಲಪ್ಪ ನವಣಿ, ಗೌರವ ಕಾರ್ಯದರ್ಶಿ ಶಂಕರ ಪಾಟೀಲ್, ನಿರ್ದೇಶಕರುಗಳಾದ ವಿರೂಪಾಕ್ಷ ಸಾಂಬ್ರಾಣಿ, ಶಿವನಗೌಡ ಪಾಟೀಲ್, ತಿಮ್ಮಣ್ಣ ಹೊಸೂರು, ಶಿವಕುಮಾರ ಸರಶೆಟ್ಟಿ,  ದಯಾನಂದ ಪಾಟೀಲ್, ಎಸ್. ಎಂ. ಪಟ್ಟಣಶೆಟ್ಟಿ, ಎಸ್. ಪಿ.  ದಯಾನಂದ, ಬಸವರಾಜ ಹರ್ಸೂರ, ಆಮಂತ್ರಿತ ನಿರ್ದೇಶಕರಾದ ಶಂಕರ ಪಾಗೋಜಿ ಹಾಗೂ ತೋಟಪ್ಪ ಶೇಖ ಹಾಗೂ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಸಂಘ ಸಂಸ್ಥೆಗಳ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರುವರು.

ವೇದಿಕೆಯ ಕಾರ್ಯಕ್ರಮದ ನಂತರ ನಮ್ಮ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿಯಂತೆ ಒಬ್ಬರಿಗೊಬ್ಬರು ಬನ್ನಿ ವಿನಿಮಯ ಮಾಡಿಕೊಂಡು ಬಂಗಾರದಂಗೆ ಇರೋಣ ಎಂದು ಶುಭ ಕೋರುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಶಂಕರ ಪಾಟೀಲ್, ನಿರ್ದೇಶಕರಾದ ದಯಾನಂದ ಪಾಟೀಲ್, ತಿಮ್ಮಣ್ಣ ಹೊಸೂರು, ಹಿರಿಯರಾದ ಬಸವರಾಜ ದಿಂಡೂರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next