Advertisement

ಬ್ಯಾನರ್‌ ಮುದ್ರಕರಿಗೇ ಅಂಕುಶ

12:11 PM Aug 23, 2017 | Team Udayavani |

ಬೆಂಗಳೂರು: ನಿಷೇಧದ ನಡುವೆಯೂ ನಗರದಲ್ಲಿ ಹೆಚ್ಚುತ್ತಿರುವ ಫ್ಲೆಕ್ಸ್‌-ಬ್ಯಾನರ್‌ ಹಾವಳಿ ನಿಯಂತ್ರಿಸುವಲ್ಲಿ ಹೈರಾಣಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಈ ನಿಷೇಧಿತ ಫ್ಲೆಕ್ಸ್‌ಗಳ ಮುದ್ರಕರ ವಿರುದ್ಧವೂ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement

ಈ ಸಂಬಂಧ ಪ್ಲೆಕ್ಸ್‌-ಬ್ಯಾನರ್‌ ಮುದ್ರಣ ಘಟಕಗಳ ಸಮೀಕ್ಷೆ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು, ಅನಧಿಕೃತ ಹಾಗೂ ಪರವಾನಗಿ ಪಡೆದ ಮುದ್ರಣ ಘಟಕಗಳನ್ನು ಪತ್ತೆ ಹಚ್ಚಿದ್ದಾರೆ. ಅನಧಿಕೃತ ಮುದ್ರಣಗಳಿಗೆ ಬೀಗ ಜಡಿದು, ಟ್ರೇಡ್‌ ಲೈಸನ್ಸ್‌ ಪಡೆದ ಮುದ್ರಕರಿಗೆ ನೋಟಿಸ್‌ ನೀಡಿ ಎಚ್ಚರಿಕೆ ನೀಡಲು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಖುದ್ದು ಮುಖ್ಯಮಂತ್ರಿವರೇ ಫ್ಲೆಕ್ಸ್‌-ಬ್ಯಾನರ್‌ ಹಾವಳಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ನಿಷೇಧಿಸಿ ವರ್ಷಗಳೇ ಕಳೆದಿವೆ. ಫ್ಲೆಕ್ಸ್‌ ಹಾಕುವವರ ವಿರುದ್ಧ ಈಗಾಗಲೇ ನಗರದಲ್ಲಿ 180 ಪ್ರಕರಣಗಳನ್ನು ದಾಖಲಿಸಿದ್ದು, ಈ ಪೈಕಿ ಪೂರ್ವ ವಲಯದಲ್ಲೇ 52 ಜನರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಇಷ್ಟೇ ಅಲ್ಲ, ಪ್ಲಾಸ್ಟಿಕ್‌ ನಿಷೇಧ ಉಲ್ಲಂಘನೆ ಅಡಿ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ನಗರದಲ್ಲಿ ಅವುಗಳ ಹಾವಳಿ ನಿಂತಿಲ್ಲ. ಇದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೂಲದಲ್ಲೇ ಫ್ಲೆಕ್ಸ್‌ ಉಪಟಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುದ್ರಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. 

ನಿಯಮ ಇದೆ; ಪರಿಣಾಮಕಾರಿಯಾಗಿಲ್ಲ
ಫ್ಲೆಕ್ಸ್‌ ಪ್ರಾಯೋಜಕರು ಮಾತ್ರವಲ್ಲ; ಮುದ್ರಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ಈಗಾಗಲೇ ಚಾಲ್ತಿಯಲ್ಲಿದೆ. ಆದರೆ, ಅದರ ಪಾಲನೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಅಡಿ ಮುದ್ರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಅಂತಹ ಮುದ್ರಕರನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರೇಡ್‌ ಲೈಸನ್ಸ್‌ ಪಡೆದ ಹಾಗೂ ಅನಧಿಕೃತ ಮುದ್ರಣ ಯೂನಿಟ್‌ಗಳನ್ನು ಪಟ್ಟಿ ಮಾಡಲಾಗುತ್ತಿದೆ ಎಂದು ಟ್ರೇಡ್‌ ಲೈಸನ್ಸ್‌ ವಿಭಾಗದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು. 

ನಗರದಲ್ಲಿ ಅಂದಾಜು 70ರಿಂದ 80 ಫ್ಲೆಕ್ಸ್‌-ಬ್ಯಾನರ್‌ ಮುದ್ರಣ ಘಟಕಗಳಿವೆ. ಈ ಪೈಕಿ ಶೇ. 15ರಿಂದ 20ರಷ್ಟು ಮಾತ್ರ ಪರವಾನಗಿ ಪಡೆದಿದ್ದು, ಉಳಿದವು ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿವೆ. ಆದರೆ, ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ. ಇನ್ನೊಂದು ವಾರದಲ್ಲಿ ಈ ಸಂಬಂಧ ಸಮೀಕ್ಷಾ ವರದಿಯನ್ನು ಸಲ್ಲಿಸಲಾಗುವುದು. ಅದನ್ನು ಆಧರಿಸಿ ಮೇಲಧಿಕಾರಿಗಳು ಆದೇಶ ಹೊರಡಿಸಲಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. 

Advertisement

ಸಾಕ್ಷಿಗಳೇ ಸಿಗ್ತಿಲ್ಲ
ಎಲ್ಲ ಪ್ರಕಾರದ ಫ್ಲೆಕ್ಸ್‌-ಬ್ಯಾನರ್‌ಗಳನ್ನು ನಗರದಲ್ಲಿ ನಿಷೇಧಿಸಲಾಗಿದೆ. ನಿಯಮ ಉಲ್ಲಂ ಸುವವರ ವಿರುದ್ಧ ಎಫ್ಐಆರ್‌ ಕೂಡ ದಾಖಲಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 180ಕ್ಕೂ ಅಧಿಕ ಎಫ್ಐಆರ್‌ ದಾಖಲಾಗಿವೆ. ಆದರೆ, ತಪ್ಪಿತಸ್ಥರ ಕ್ರಮಕ್ಕೆ ಸ್ಥಳೀಯರಿಬ್ಬರ ಸಾಕ್ಷಿಗಳು ಮತ್ತು ಮಹಜರು ಮಾಡಬೇಕಾಗುತ್ತದೆ. ಫ್ಲೆಕ್ಸ್‌ಗಳು ಆಯಾ ಸ್ಥಳೀಯ ನಾಯಕರು, ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಹಾಗಾಗಿ, ಸಾಕ್ಷಿಗಳಾರೂ ಮುಂದೆಬರುವುದಿಲ್ಲ. ಇದರಿಂದ ವಿಚಾರಣೆ ಹಂತದಲ್ಲೇ ಕೇಸುಗಳು ಉಳಿಯುತ್ತಿವೆ ಎಂದು ಜಾಹಿರಾತು ವಿಭಾಗದ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು. 

ಫ್ಲೆಕ್ಸ್‌-ಬ್ಯಾನರ್‌ಗಳನ್ನು ನಿಷೇಧಿಸಿದ್ದರೂ, ಕಡಿವಾಣ ಕಷ್ಟವಾಗುತ್ತಿದೆ. ಆದ್ದರಿಂದ ಇದರ ಹಾವಳಿಯನ್ನು ಮೂಲದಲ್ಲೇ ನಿಯಂತ್ರಿಸಬೇಕು ಎಂಬ ಉದ್ದೇಶದಿಂದ ಮುದ್ರಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಸಮೀಕ್ಷೆಗೆ ಸೂಚಿಸಿದ್ದು, ವಾರದಲ್ಲಿ ಆದೇಶ ಹೊರಡಿಸಲಾಗುವುದು. 
-ಎನ್‌. ಮಂಜುನಾಥ್‌ ಪ್ರಸಾದ್‌, ಆಯುಕ್ತರು, ಬಿಬಿಎಂಪಿ.

ಫ್ಲೆಕ್ಸ್‌ ಕಾರುಬಾರು 
ಗಣೇಶ ಚತುರ್ಥಿಯೊಂದಿಗೆ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಈ ಮಧ್ಯೆ ರಾಜ್ಯದಲ್ಲಿ ಇದು ಚುನಾವಣಾ ವರ್ಷವೂ ಆಗಿದ್ದು, ಈಗಾಗಲೇ ಚುನಾವಣಾ ಪ್ರಚಾರ ಆರಂಭಗೊಂಡಿದೆ. ಇದೆಲ್ಲವೂ ಫ್ಲೆಕ್ಸ್‌-ಬ್ಯಾನರ್‌ಗಳ ಹಾವಳಿ ಹೆಚ್ಚಾಗಲು ಕಾರಣ.  ಬ್ಯಾನರ್‌-ಫ್ಲೆಕ್ಸ್‌ಗಳಿಂದ ನಗರದ ಸೌಂದರ್ಯ ಮಾತ್ರ ಹದಗೆಡುತ್ತಿಲ. ಎಷ್ಟೋ ಕಡೆ ರಸ್ತೆ ಮಧ್ಯೆಯೇ ಫ್ಲೆಕ್ಸ್‌ ಜೋತುಬಿದ್ದಿರುತ್ತವೆ. ಇವು ಅಪಘಾತಗಳಿಗೆ ಕಾರಣವಾಗುತ್ತಿವೆ. ಕೆಲವೊಮ್ಮೆ ಫ್ಲೆಕ್ಸ್‌ಗಳಿಗೆ ಬಳಸಿದ ಮೊಳೆಗಳ ಮೇಲೆ ವಾಹನಗಳು ಹಾದುಹೋಗುತ್ತವೆ. ಜನ ತುಳಿದು ತೊಂದರೆ ಅನುಭವಿಸುತ್ತಾರೆ. ಫ‌ುಟ್‌ಪಾತ್‌ಗಳಲ್ಲಿ ನಡೆಯುವ ಪಾದಚಾರಿಗಳಿಗೂ ಇದು  ಕಿರಿಕಿರಿ ಉಂಟು ಮಾಡುತ್ತದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next