ಚಂಡೀಗಢ: ಹಿಮಾಚಲ ಪ್ರದೇಶದ ವಿಧಾನಸಭೆಯ ಗೇಟಿನ ಮೇಲೆ ಖಲಿಸ್ಥಾನ ಧ್ವಜವನ್ನಿಟ್ಟ ಬೆನ್ನಲ್ಲೇ, ನಿಷೇಧಿತ ಪ್ರತ್ಯೇಕತಾವಾದಿ ಗುಂಪಾಗಿರುವ “ಸಿಖ್ ಫಾರ್ ಜಸ್ಟೀಸ್’
(ಎಸ್‌ಎಫ್ಜೆ) ವಿಡಿಯೋವೊಂದನ್ನು ಹರಿಬಿಟ್ಟಿದೆ.
ಹಿಮಾಚಲದ ಮಂಡಿಯಲ್ಲಿ ನಡೆದ ಕೇಜ್ರಿವಾಲ್ ರ್ಯಾಲಿಯಲ್ಲಿ ಭಾಗವಹಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ತೆರಳಿದ ಜನರೊಂದಿಗೇ ಖಲಿಸ್ಥಾನದ ಧ್ವಜ ಕೊಟ್ಟು ಕಳುಹಿಸಿದ್ದಾಗಿ ಎಸ್‌ಎಫ್ಜೆ ಹೇಳಿಕೊಂಡಿದೆ.
“ಪಂಜಾಬ್ ಚುನಾವಣೆ ವೇಳೆಯಲ್ಲಿ ಕೇಜ್ರಿವಾಲ್ ಮತ್ತು ಮಾನ್ ಅವರು ಆಪ್‌ಗೆ 46 ಕೋಟಿ ರೂ. ದೇಣಿಗೆ ನೀಡುವಂತೆ ಖಲಿಸ್ತಾನ ಪರ ಸಿಕ್ಖರಿಗೆ ಆಮಿಷ ಒಡ್ಡಿದ್ದರಿಂದಾಗಿ ನಾವು ಅವರ ಆಪ್ತರನ್ನೇ ಖಲಿಸ್ಥಾನ ಪರ ಪ್ರಚಾರಕ್ಕೆ ಬಳಸಿಕೊಂಡಿದ್ದೇವೆ. ಈ ಕೃತ್ಯದ ಮೂಲಕ ಹಿಮಾಚಲ ಪ್ರದೇಶವನ್ನು ಪಂಜಾಬ್‌ನ ಭಾಗವಾಗಿ ಮರುಪಡೆಯಲಾಗುವುದು ಎನ್ನುವ ಸಂದೇಶವನ್ನು ಸಿಎಂ ಜೈ ರಾಮ್ ಠಾಕೂರ್‌ಗೆ ರವಾನಿಸಿದ್ದೇವೆ’ ಎಂದು ವೀಡಿಯೋದಲ್ಲಿ ತಿಳಿಸಲಾಗಿದೆ.