ಲಂಡನ್: ಪುರುಷರ ಸಿಂಗಲ್ಸ್‌ನಲ್ಲಿ 2ನೇ ರ್‍ಯಾಂಕಿನ ಆಟಗಾರರಾಗಿರುವ ಡ್ಯಾನಿಲ್ ಮೆಡ್ವೆಡೇವ್ ಅವರಿಗೆ ವಿಂಬಲ್ಡನ್ ಟೆನಿಸ್ ಕೂಟದಲ್ಲಿ ಆಡದಂತೆ ನಿಷೇಧ ಹೇರುವ ಸಾಧ್ಯತೆಯಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಂಬಲ್ಡನ್ ಟೆನಿಸ್ ಕೂಟವು ರಷ್ಯಾದ ಟೆನಿಸ್ ಆಟಗಾರರಿಗೆ ನಿಷೇಧ ಹೇರುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ರಷ್ಯಾಕ್ಕೆ ಬೆಂಬಲ ನೀಡುತ್ತಿರುವ ಕಾರಣ ಬೆಲರೂಸ್‌ನ ಆಟಗಾರರು ಕೂಡ ವಿಂಬಲ್ಡನ್‌ನಲ್ಲಿ ಆಡಲು ಅವಕಾಶ ನೀಡುವ ಸಾಧ್ಯತೆಯಿಲ್ಲ.
ಕಳೆದ ಮಾರ್ಚ್ ಆರಂಭದಲ್ಲಿ ಟೆನಿಸ್ ನ್ಪೋರ್ಟ್ಸ್ ಮಂಡಳಿಗಳು ವಿಶ್ವದಾದ್ಯಂತ ತಂಡ ಸ್ಪರ್ಧೆಗಳಲ್ಲಿ ರಷ್ಯಾದ ಆಟಗಾರರು ಭಾಗವಹಿಸದಂತೆ ನಿಷೇಧ ಹೇರಿದ್ದವು. ಆದರೆ ರಷ್ಯಾದ ಆಟಗಾರರು ವೈಯಕ್ತಿಕವಾಗಿ ರಾಷ್ಟ್ರೀಯ ಧ್ವಜದ ಅನುಪಸ್ಥಿತಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ಕೈರನ್ ಪೋಲಾರ್ಡ್
ಆದರೆ ವಿಂಬಲ್ಡನ್‌ನ ಸಂಘಟಕರಾಗಿರುವ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ಮೆಡ್ವೆಡೇವ್ ಸಹಿತ ಎಂಟನೇ ರ್‍ಯಾಂಕಿನ ಆ್ಯಂಡ್ರೆ ರುಬ್ಲೆವ್, ಕಳೆದ ವರ್ಷ ವಿಂಬಲ್ಡನ್‌ನ ಸೆಮಿಫೈನಲಿಸ್ಟ್ ಆರಿನಾ ಸಬಲೆಂಕಾ ಅವರಿಗೆ ನಿಷೇಧ ಹೇರುವ ನಿಟ್ಟಿನಲ್ಲಿ ಆಲೋಚಿಸುತ್ತಿದೆ. ಈ ಬಗ್ಗೆ ಕ್ಲಬ್ ಬ್ರಿಟಿಷ್ ಸರಕಾರದ ಜತೆ ಮಾತುಕತೆ ನಡೆಸುತ್ತಿದ್ದು ಎಪ್ರಿಲ್ ತಿಂಗಳಲ್ಲಿ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.