Advertisement
Related Articles
Advertisement
ಸಂಜೀವ ಸುವರ್ಣರ ನಿರ್ದೇಶನದಲ್ಲಿ ನಡೆಯುತ್ತಿರುವ ಇಂದ್ರಾಳಿಯ ಯಕ್ಷಗಾನ ತರಬೇತಿ ಕೇಂದ್ರ, ಶುದ್ಧ ದೇಸೀ ಘಮ ಹೊಂದಿದೆ. ಅಲ್ಲಿರುವ ಶಿಷ್ಯಂದಿರ ಕಥೆ ಒಂದೊಂದು ರೀತಿಯದು. ಒಂದು ಮಗು ಯಕ್ಷ$ಗಾನದ ಗಂಧವೇ ಅರಿಯದ ಜಿಲ್ಲೆ ಯಿಂದ ಬಂದವನಾದ್ರೆ, ಮತ್ತೂಬ್ಬ ಭಾಷೆಯೇ ಬಾರದ ಹೊರರಾಜ್ಯದವನು…. ಹೀಗೆ ದೇಶದ ಬೇರೆ ಬೇರೆ ಭಾಗಗಳಿಂದ ಶಿಷ್ಯರನ್ನು ಹೊಂದಿರುವ ಸಂಜೀವ ಸುವರ್ಣ ಉಚಿತ ಶಿಕ್ಷಣದ ಜತೆಗೆ ಕಲಾಸಕ್ತಿಯನ್ನೂ ಮಕ್ಕಳಲ್ಲಿ ಬೆಳೆಸುತ್ತಿ¨ªಾರೆ. ಸಂಸ್ಕಾರ ಕಟ್ಟಿಕೊಡುತ್ತಿದ್ದಾರೆ. ಅಪ್ಪಟ ಸೊಗಡಿನಲ್ಲಿ ಮಣ್ಣಿನ ಕಲೆಯನ್ನು ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ವಿಶೇಷ ಸಾಮರ್ಥಯದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿದ್ದು ಇವರ ಹಿರಿಮೆ. ಕುಂದಾಪುರ ಮೂಡುಬಗೆಯ ಜಿ.ಶಂಕರ್ ಶಾಲೆಯ ವಿಶೇಷ ಚೇತನ ಮಕ್ಕಳನ್ನು ಮೊದಲ ಬಾರಿ ಕಂಡಾಗ, ಸುವರ್ಣರ ಉತ್ಸಾಹ ಜರ್ರನೆ ಇಳಿದಿತ್ತು.
ಇಂಥಾ ಮಕ್ಕಳಿಗೆ ಹೇಗಪ್ಪಾ ಹೆಜ್ಜೆಗಳನ್ನು ಹೇಳಿಕೊಡೋದು ಅಂತ ಪೇಚಿಗೆ ಸಿಲುಕಿಕೊಂಡರು. ಇದು ನನ್ನಿಂದಾಗೋ ಕೆಲಸವಲ್ಲ ಅಂತ ಕೈಚೆಲ್ಲಿದ್ದೂ ಆಯ್ತು. ಆದ್ರೆ, ಕಡೆಗೊಮ್ಮೆ, ಇದೂ ಒಂದು ಕೈ ನೋಡೇ ಬಿಡೋಣ ಅಂತ ಮನಸು ಮಾಡಿ ಮತ್ತೆ ವಿಶೇಷ ಮಕ್ಕಳಿಗೆ ಹೆಜ್ಜೆ ಕಲಿಸುವ ನಿಧಾರಕ್ಕೆ ಬಂದ್ರು. ಸುವರ್ಣರು ಚೆಂಡೆ ಬಾರಿಸುತ್ತಾ ಹೆಜ್ಜೆ ಹಾಕಿ ಕುಣೀತಾ ಇದ್ರೆ ಮಕ್ಕಳು ಸ್ಪಂದಿಸುತ್ತಿದ್ದ ರೀತಿ ಸುವರ್ಣರ ಮನಸ್ಸನ್ನು ಆರ್ದವನ್ನಾಗಿಸಿತ್ತು. ಸುವರ್ಣರು ಕುಣಿದಂತೆ ಮಕ್ಕಳು ಕುಣೀತಿದ್ರು. ಚೆಂಡೆಯ ಧ್ವನಿಗೆ ಮಕ್ಕಳ ಮುಖದಲ್ಲಿ ನಗು ಅರಳುತ್ತಿತ್ತು. ಈ ನಡುವೆ, ಬುದ್ದಿಮಾಂದ್ಯ ಶ್ರವಣ ದೋಷವುಳ್ಳ ಮಕ್ಕಳಿಂದ ಯಕ್ಷಗಾನ ರಂಗದ ಮೇಲೆ ತರುವುದು ಹೇಗೆ ಎಂದು ಲೆಕ್ಕಾಚಾರ ಹಾಕುತ್ತಿತ್ತು ಅವರ ಮನಸ್ಸು. ಆ ಮಕ್ಕಳು, ಸಂಜೀವ ಸುವರ್ಣ ಮಾಡಿ ತೋರಿಸಿದ ಅಭಿನಯವನ್ನು ಅನುಕರಣೆ ಮಾಡುತ್ತಿದ್ದರು. ಇದೇ ತಂತ್ರಗಾರಿಕೆಯನ್ನು ಬಳಸಿ ಈ ಮಕ್ಕಳಿಂದ ಯಕ್ಷಗಾನ ಕುಣಿಸಲು ಮುಂದಾಗಿಯೇ ಬಿಟ್ರಾ. ಆ ಮಕ್ಕಳಿಗೆ ಹೇಳಿಕೊಟ್ಟ ಪ್ರಸಂಗ ಜಟಾಯು ಮೋಕ್ಷ. ವಿಶೇಷ ಚೇತನ ಮಕ್ಕಳು ಅದನ್ನು ರಂಗದ ಮೇಲೆ ತಂದಿದ್ದು ಹೇಗಂದ್ರೆ ರಂಗದ ಮುಂಭಾಗ ತೆರೆ ಮರೆಯಲ್ಲಿ ಪಾತ್ರವನ್ನು ಸಂಜೀವ ಸುವರ್ಣರು ಅಭಿನಯಿಸಿ ತೋರಿಸುತ್ತಿದ್ದರು. ಮಕ್ಕಳು ಅದನ್ನು ಅನುಕರಿಸಿ ಆಟ ಆಡಿ ತೋರಿಸಿದರು. ಈ ಮಕ್ಕಳ ಪ್ರದಶನವನ್ನು ಕಂಡ ಹೆತ್ತವರ ಕಂಗಳ ಆನಂದಭಾಷ್ಪವನ್ನು ಸುವರ್ಣರು ಇಂದಿಗೂ ಮರೆಯೋದಿಲ್ಲ. ಇದೇ ವಿಶೇಷ ಚೇತನ ಮಕ್ಕಳು ಉಡುಪಿಯ ಶ್ಯಾಮಿಲಿ ಸಭಾಂಗಣ ಮತ್ತು ಎಂಜಿಎಂ ಕಾಲೇಜಿನಲ್ಲಿ ಪ್ರದಶನ ನೀಡಿದ್ದಾರೆ.
ಯಕ್ಷಗಾನ ಕಲಾವಿದನಾಗಿ 50 ದೇಶಗಳನ್ನು ಕಂಡ ಸುವರ್ಣರಿಗೆ ಅವರಿಗೆ ಮಿತಿ ಅಂತನಿಸಿದ್ದು ಭಾಷೆ. ತಾನೂ ಇಂಗ್ಲಿಷ್ ಭಾಷೆ ಮಾತನಾಡುವಂತಿದ್ದರೆ, ಹೀಗೊಂದು ಆಸೆ ಪಟ್ಟಿದ್ದರಂತೆ ಸುವರ್ಣರು. ಬೇರೆ ಬಾಷೆಯ ವಿದೇಶದ ಶಿಷ್ಯರೊಂದಿಗೆ ವ್ಯವಹರಿಸುವಾಗ ಅನೇಕ ಬಾರಿ ಭಾಷೆ ಬಾರದೇ ಇರುವುದು ತೊಡಕಾಗಿ ಕಂಡಿದೆ. ಕುಣಿದು ತೋರಿಸಬಲ್ಲರು. ಕುಣಿಯುವುದನ್ನು ನುಡಿಗಳಲ್ಲಿ ಪರಿಣಾಮಕಾರಿಯಾಗಿ ವಿವರಿಸಲು ಅಸಮರ್ಥನಾಗುತ್ತಿ¨ªೆ ಎಂದು ಸಂಜೀವ ಸುವರ್ಣರು ಹೇಳ್ತಾರೆ. ಇದು ಇಡೀ ಯಕ್ಷಗಾನ ಕ್ಷೇತ್ರದ ದೊಡ್ಡ ಸಮಸ್ಯೆ ಎಂದೆನ್ನುತ್ತಾರೆ ಅವರು. ಬರೆಯುವ ಹೆಚ್ಚಿನವರಿಗೆ ಕುಣಿಯಲು ಬರೋದಿಲ್ಲ. ಕುಣಿಯಬಲ್ಲ ಕೆಲವರಿಗೆ ಬರೆಯಲು ತಿಳಿಯದು. ಪ್ರತಿಭಾವಂತ ಯಕ್ಷಗಾನ ಕಲಾವಿದರಿಗೆ ಕುಣಿದು, ನುಡಿದು ಬರೆದು ವಿವರಿಸುವಂತಿದ್ದರೆ ಎಂದವರು ಪರಿತಪಿಸಿದ್ದುಂಟು. ಅದೇನೇ ಮಿತಿಗಳಿರಲಿ ಕಲೆಗೆ ಭಾಷೆ ಬೇಕೆಂದಿಲ್ಲ. ಕಲೆ ವಿಶ್ವದ ಜನರನ್ನು ಸಂಕೋಲೆಯಂತೆ ಬೆಸೆಯುತ್ತದೆ. ಅದಕ್ಕೆ ಸಾಕ್ಷಿ ಎನ್ನುವ ಹಾಗೇ ಇಂಗ್ಲೀಷ್ ಬಾರದೆಯೂ ಜರ್ಮನಿಯ ಕ್ಯಾಥರಿನ್ ಬೈಂದರ ಯಕ್ಷ ಗಾನದಲ್ಲಿ ಪಿಎಚ್‌ಡಿ ಮಾಡಲು ಮಾರ್ಗದರ್ಶಕರಾಗಿ ನಿಂತವರು ಯಕ್ಷಗುರು ಸಂಜೀವ ಸುವರ್ಣರು.
ಯಕ್ಷಗಾನ ಮನರಂಜನೆಗಾಗಿ ಹುಟ್ಟಿಕೊಂಡದ್ದಲ್ಲ. ಅದು ಆರಾಧನಾ ಕಲೆ. ಒಂದು ಕಾಲದಲ್ಲಿ ತಳಮಟ್ಟದ ಜನರಿಗೆ ವಿದ್ಯಾಭ್ಯಾಸ ಕೈಗೆಟುಕದ ದಿನಗಳಲ್ಲಿ ಯಕ್ಷಗಾನ ಶಿಕ್ಷಣದ ಮಾಧ್ಯಮವಾಗಿತ್ತು. ಆರಾಧನಾ ಕಲೆ ಇಂದು ಟಿಕೆಟ್ ಆಟವಾಗಿ ಬದಲಾಗಿದೆ. ಮನರಂಜನೆಯ ಸ್ವರೂಪವನ್ನು ಪಡೆದುಕೊಂಡಿದೆ. ಯಕ್ಷಗಾನ ಕಮರ್ಷಿಯಲ್ ಆಗ್ತಾ ಹೋಗುತ್ತಿದೆ. ಅದರಿಂದ ಯಕ್ಷಗಾನದ ಮೂಲತ್ವಕ್ಕೆ ಧಕ್ಕೆಯಾಗ್ತಿದೆ. ಇದು ಬನ್ನಂಜೆ ಸಂಜೀವ ಸುವರ್ಣರು ಹೇಳ್ಳೋ ಮಾತು.
ಶುಭಾಶಯ ಜೈನ್