ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾ ಅಲಿಯಾಸ್ ರಾಜೇಂದ್ರ ಪ್ರಸಾದ್ ಅನಾರೋಗ್ಯದಲ್ಲಿರುವ ತಾಯಿಯನ್ನು ಭೇಟಿ ಮಾಡುವುದಕ್ಕಾಗಿ ನ್ಯಾಯಾಲಯದ ಅನುಮತಿ ಮೇರೆಗೆ ಜು. 8ರಂದು ಭಾರೀ ಪೊಲೀಸ್ ಭದ್ರತೆಯೊಂದಿಗೆ ಉಡುಪಿಗೆ ಆಗಮಿಸಿದ್ದು, ರಾತ್ರಿ ನಗರ ಠಾಣೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ ಮಲ್ಪೆ ಕಲ್ಮಾಡಿಯಲ್ಲಿರುವ ತಾಯಿಯನ್ನು ಪೊಲೀಸರು ಭೇಟಿ ಮಾಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬೆಳಗ್ಗೆ ಭಾರೀ ಭದ್ರತೆಯೊಂದಿಗೆ ಈತನನ್ನು ಕರೆತಂದ ಉಡುಪಿ ಪೊಲೀಸರು ಸಂಜೆ 6.45ರ ಸುಮಾರಿಗೆ ಉಡುಪಿ ಠಾಣೆ ತಲುಪಿದರು. ಬೆಂಗಾವಲು ವಾಹನಗಳು, ಗನ್‌ಮ್ಯಾನ್‌ಗಳ ಸಹಿತವಾದ ಭದ್ರತೆಯಲ್ಲಿ ಠಾಣೆಯ ಆವರಣದೊಳಕ್ಕೆ ಕರೆತರಲಾಗಿತ್ತು. ಠಾಣೆಯ ಮೆಟ್ಟಿಲುಗಳ ಬಳಿಯಲ್ಲಿಯೇ ಪೊಲೀಸ್ ವಾಹನದಿಂದ ಇಳಿಸಿ ಭಾರೀ ವೇಗದಲ್ಲೇ ಠಾಣೆಯೊಳಗೆ ಕರೆದೊಯ್ಯಲಾಯಿತು. ಠಾಣೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬ್ಯಾರಿಕೇಡ್‌ಗಳನ್ನು ಅಳವಡಿಸಿ ಠಾಣೆಯ ಆವರಣಕ್ಕೆ ಪೊಲೀಸರನ್ನು ಹೊರತುಪಡಿಸಿ ಮಾಧ್ಯಮದವರು ಸಹಿತ ಇತರರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಟೀ ಶರ್ಟ್ ಧರಿಸಿದ್ದ ರಾಜಾ ಪೊಲೀಸರ ಜತೆ ಲಗುಬಗನೆ ಠಾಣೆಯೊಳಗೆ ತೆರಳಿದ. ಬನ್ನಂಜೆ ರಾಜಾನ ತಾಯಿಯ ಮನೆ ಪಕ್ಕದ ರಸ್ತೆಗಳಲ್ಲಿಯೂ ಬ್ಯಾರಿ ಕೇಡ್‌ಗಳನ್ನು ಅಳವಡಿಸಲಾಗಿದೆ.
ಸೋಮವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತಾಯಿಯನ್ನು ಭೇಟಿ ಮಾಡಲು ನ್ಯಾಯಾಲಯ ಅನುಮತಿ ನೀಡಿರುವುದರಿಂದ ಈ ಅವಧಿಯಲ್ಲಿ ಭೇಟಿ ಮಾಡಿಸುವ ಸಾಧ್ಯತೆ ಇದೆ. ಪರೋಲ್‌ನಲ್ಲಿ ಬಿಡುಗಡೆ ಮಾಡಲು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರೂ ಅದಕ್ಕೆ ಅವಕಾಶ ದೊರೆಯಲಿಲ್ಲ. ಈಗ ಪೊಲೀಸ್ ಭದ್ರತೆಯಲ್ಲಿ ಹಗಲಿನಲ್ಲಿ 12 ಗಂಟೆಗಳ ಅವಧಿಯಲ್ಲಿ ಭೇಟಿ ಮಾಡಲು ನ್ಯಾಯಾಲಯ ಅವಕಾಶ ನೀಡಿದೆ. ಹಾಗಾಗಿ ರಾತ್ರಿ ವೇಳೆ ಠಾಣೆಯಲ್ಲಿಯೇ ಇರಿಸಿಕೊಳ್ಳಲಾಗಿದೆ. ಭೇಟಿ ವೇಳೆ ತಾಯಿ ಜತೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿದೆ. ರಾತ್ರಿ ಪ್ರಯಾಣಕ್ಕೂ ಅವಕಾಶವಿಲ್ಲ. ಸಾರಿಗೆ ಮತ್ತು ಭದ್ರತಾ ವೆಚ್ಚವನ್ನು ಬನ್ನಂಜೆ ರಾಜನೇ ಭರಿಸಬೇಕಾಗಿದೆ.
ಕುಂದಾಪುರ ಡಿವೈಎಸ್‌ಪಿ ದಿನೇಶ್ ಕುಮಾರ್ ನೇತೃತ್ವದ ತಂಡ ರಾಜಾನನ್ನು ಉಡುಪಿಗೆ ಕರೆತಂದಿದೆ.
ಎಎಸ್‌ಪಿ ಕುಮಾರಚಂದ್ರ ಠಾಣೆಗೆ ಆಗಮಿಸಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.