Advertisement
ಭಾನುವಾರ ಸಂಜೆ ಪ್ರಮುಖ ವೃತ್ತ, ಬೀದಿ, ಸ್ಥಳದಲ್ಲಿ ಕಾಮಣ್ಣನ ಸುಟ್ಟು, ಸೋಮವಾರ ಬಣ್ಣ ಹಾಕುವುದಕ್ಕೆ ಯುವಕರು ಸಜ್ಜಾಗಿದ್ದರು. ಬಿಸಿಲು ಏರುತ್ತಿದ್ದಂತೆ ಬಣ್ಣದ ಎರೆಚಾಟವೂ ಹೆಚ್ಚಾಯಿತು. ಚಿಣ್ಣರು, ಹೆಂಗೆಳೆಯರು, ಯುವಕರು, ಮಧ್ಯ ವಯಸ್ಕರರು…ಹೀಗೆಯಾವುದೇ ವಯೋಮಾನ ಹಮ್ಮುಬಿಮ್ಮು ಇಲ್ಲದೆ ಎಲ್ಲರೂ ಹೋಳಿಯ ರಂಗಿನಾಟದಲ್ಲಿ ಮಿಂದೆದ್ದರು.
Related Articles
Advertisement
ನೀರು ಸುರಿಸುತ್ತಿದ್ದರೂ ಒಬ್ಬರ ಮೇಲೆ ಒಬ್ಬರು ನಿಂತು ಮಡಿಕೆ ಒಡೆಯುವುದಕ್ಕೆ ಸೆಣಸುವಾಗ ಆಯ ತಪ್ಪಿ ಧೊಪ್ಪನೆ ಬೀಳುವುದರಲ್ಲೂ ಸಂಭ್ರಮಪಟ್ಟರು. ಅಂತೂ ಇಂತೂ ಹರಸಾಹಸ ಮಾಡಿ, ಮಡಕೆ ಒಡೆದಾಗ ಪಡುತ್ತಿದ್ದ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ. ಇದೇ ಮೊದಲ ಬಾರಿ ಯುವತಿಯರಿಗಾಯೇ ಬಣ್ಣ ಹಾಕಲು,ಡ್ಯಾನ್ಸ್ ಮಾಡಲಿಕ್ಕೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿತ್ತು.
ಈ ಅವಕಾಶವನ್ನು ಭರ್ಜರಿಯಾಗಿಯೇ ಬಳಸಿಕೊಂಡ ಯುವತಿಯರು ತಾವು ಯಾರಿಗೇನು ಕಡಿಮೆ ಇಲ್ಲ ಎನ್ನುವಂತೆ ಸಖತ್ತಾಗಿ ಬಣ್ಣದ ಜೊತೆ ಜೊತೆಗೆ ಹೆಜ್ಜೆ ಹಾಕಿದರು. ಧಾರಾಳವಾಗಿಯೇ ಮೊಟ್ಟೆ ಹೊಡೆದರು. ಕುಣಿದು, ಕುಪ್ಪಳಿಸಿದರು. ಶವರ್ ವ್ಯವಸ್ಥೆ ಇನ್ನೂ ಹೆಚ್ಚಿನ ಉತ್ತೇಜನ ನೀಡುವಂತಿತ್ತು. ವಿನೋಬ ನಗರ 2ನೇ ಮುಖ್ಯ ರಸ್ತೆಯ ಗಣೇಶ ದೇವಸ್ಥಾನ ಬಳಿ ಮಡಕೆ ಒಡೆಯುವ, 10 ರೂಪಾಯಿ ನೋಟುಕೆಳಕ್ಕೆ ತರುವ ಆಟ ಮೋಜಿನಿಂದ ಕೂಡಿತ್ತು.
ನೂರಾರು ಸಂಖ್ಯೆಯಲ್ಲಿದ್ದ ಯುವಕರು, ಚಿಣ್ಣರು, ಮಹಿಳೆಯರು, ವಿದ್ಯಾರ್ಥಿನಿಯರು ಸಂಭ್ರಮದಿಂದ ಹೋಳಿ ಹಬ್ಬದಾಚರಣೆಯಲ್ಲಿ ತೊಡಗಿದ್ದರು. ವಿದ್ಯಾನಗರ ಮುಖ್ಯ ರಸ್ತೆ, ಶಾಮನೂರು ರಸ್ತೆ, ಹಳೆ ಬಸ್ ನಿಲ್ದಾಣ, ಹೊಂಡದ ಸರ್ಕಲ್, ಮಂಡಿಪೇಟೆ, ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ, ನಿಟುವಳ್ಳಿ, ಎಚ್‌ಕೆಆರ್ ವೃತ್ತ, ಸರಸ್ವತಿ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ…. ಬಹುತೇಕ ಎಲ್ಲಾ ಕಡೆ ಹೋಳಿ ಹಬ್ಬದ ಸಂಭ್ರಮ ಭರ್ಜರಿಯಾಗಿತ್ತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಉಮಾ ರಮೇಶ್, ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಮೇಯರ್ ರೇಖಾ ನಾಗರಾಜ್ ಸಹ ಹೋಳಿ ಸಂಭ್ರಮಿಸಿದರು. ಎಸ್.ಎಸ್. ಬಡಾವಣೆ 3ನೇ ಮುಖ್ಯ ರಸ್ತೆ, 8ನೇ ಕ್ರಾಸ್‌ನಲ್ಲಿ ನೈಸರ್ಗಿಕ ಬಣ್ಣದ ಹೋಳಿಗೆ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತೆ ಸೌಮ್ಯ ಬಾಪಟ್ ಚಾಲನೆ ನೀಡಿದರು.ವೇಗವಾಗಿ ಬೈಕ್ ಚಾಲನೆ, ತ್ರಿಬಲ್ ರೈಡಿಂಗ್, ಸೈಲೆನ್ಸರ್ ತೆಗೆದು ಹಾಕಿ, ಕರ್ಕಶ ಶಬ್ದ, ಜೋರಾಗಿ ಹಾರ್ನ್ ಮಾಡುವುದು, ಮೊಟ್ಟೆ ಬಳಕೆ, ನೃತ್ಯ ಮಾಡುವುದು, ಅಪರಿಚಿತರಿಗೆ ಬಣ್ಣ ಹಾಕುವುದನ್ನು ನಿಷೇಧಿಸಲಾಗಿ ತ್ತಾದರೂ ಹಬ್ಬದ ಸಂಭ್ರಮದಲ್ಲಿ ಅವೆಲ್ಲವೂ ಬಲು ಧಾರಾಳವಾಗಿಯೇ ನಡೆದವು.
ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಆಗಿದ್ದರೂ ಗುಂಡು ಪ್ರಿಯರಿಗೆ ತೊಂದರೆಆಗಲೇ ಇಲ್ಲ. ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದವರ ಮೇಲೆ ಏಕಾಏಕಿ ಬಣ್ಣ, ನೀರು ಹಾಕಿದ ಪರಿಣಾಮ ಅನೇಕರು ಬಿದ್ದು ಗಾಯಗೊಂಡರು. ಬಣ್ಣದ ಹಬ್ಬದ ನಡುವೆಯೂ ಪಿಯು ವಿದ್ಯಾರ್ಥಿಗಳು ಧಾವಂತದಲ್ಲಿ ಪರೀಕ್ಷಾ ಕೇಂದ್ರಗಳತ್ತ ದೌಡಾಯಿಸುವುದು ಕಂಡು ಬಂದಿತು. ಒಟ್ಟಾರೆಯಾಗಿ ದಾವಣಗೆರೆಯಲ್ಲಿ ಹೋಳಿ ಭರ್ಜರಿಯಾಗಿಯೇ ಇತ್ತು.