ನವದೆಹಲಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ಕೆಲವೊಂದು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು ಹತ್ತು ಕಾರ್ಮಿಕ ಸಂಘಟನೆಗಳು ಜನವರಿ 08ರ ಬುಧವಾರದಂದು ಕರೆ ನೀಡಿರುವ ಭಾರತ್ ಬಂದ್ ನಿಂದಾಗಿ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳು ವ್ಯತ್ಯಯಗೊಳ್ಳುವ ನಿರೀಕ್ಷೆ ಇದೆ.
ಹೆಚ್ಚಿನ ಬ್ಯಾಂಕ್ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹತ್ತಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು ಎಡಪಕ್ಷಗಳ ಬೆಂಬಲದೊಂದಿಗೆ ಬುಧವಾರದಂದು ಭಾರತ ಬಂದ್ ಗೆ ಕರೆ ನೀಡಿವೆ. ಆ ದಿನದಂದು ಬ್ಯಾಂಕ್ ವ್ಯವಹಾರಗಳು ಮಾತ್ರವಲ್ಲದೇ ಎಟಿಎಂ ವ್ಯವಹಾರಗಳಿಗೂ ಮುಷ್ಕರದ ಬಿಸಿ ತಟ್ಟುವ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ. ಆದರೆ ಇದೀಗ ನೆಫ್ಟ್ ಮಾದರಿಯ ಆನ್ ಲೈನ್ ಹಣ ವರ್ಗಾವಣೆ ದಿನದ 24 ಗಂಟೆಗಳಿಗೆ ವಿಸ್ತರಣೆಗೊಂಡಿರುವುದರಿಂದ ಈ ಮುಷ್ಕರದಿಂದ ನೆಟ್ ಬ್ಯಾಂಕಿಂಗ್ ಗ್ರಾಹಕರಿಗೆ ಅಷ್ಟಾಗಿ ತೊಂದರೆಯಾಗಲಾರದು.
ಜನವರಿ 08ರಂದು ತಾನು ಕರೆ ನೀಡಿರುವ ಭಾರತ್ ಬಂದ್ ಮತ್ತು ಪ್ರತಿಭಟನೆಗಳಲ್ಲಿ ಸುಮಾರು 25 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯನ್ನು ಮುಷ್ಕರಕ್ಕೆ ಕರೆನೀಡಿರುವ ಕಾರ್ಮಿಕ ಸಂಘಟನೆಗಳು ಇರಿಸಿಕೊಂಡಿವೆ. ಐ.ಎನ್.ಟಿ.ಯು.ಸಿ., ಎ.ಐ.ಟಿ.ಯು.ಸಿ., ಹೆಚ್.ಎಂ.ಎಸ್., ಸಿ.ಐ.ಟಿ.ಯು., ಎ.ಐ.ಯು.ಟಿ.ಯು.ಸಿ., ಟಿ.ಯು.ಸಿ.ಸಿ., ಸೇವಾ, ಎ.ಐ.ಸಿ.ಸಿ.ಟಿ.ಯು., ಎಲ್.ಪಿ.ಎಫ್., ಯು.ಟಿ.ಯು.ಸಿ. ಮತ್ತು ಇನ್ನಿತರ ಸಹ ಕಾರ್ಮಿಕ ಸಂಘಟನೆಗಳು ಈ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.
ಬುಧವಾರದ ರಾಷ್ಟ್ರವ್ಯಾಪಿ ಮುಷ್ಕರವು ತನ್ನ ಬ್ಯಾಂಕಿಂಗ್ ವ್ಯವಹಾರದ ಮೇಲೆ ಅಷ್ಟೇನೂ ಪರಿಣಾಮ ಬೀರದು ಎಂದು ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಮತ್ತು ಗ್ರಾಹಕರಿಗೆ ಅನನುಕೂಲವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಆದರೆ ಬ್ಯಾಂಕ್ ಆಫ್ ಬರೋಡಾದ ವ್ಯವಹಾರದ ಮೇಲೆ ಈ ಮುಷ್ಕರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನುಳಿದಂತೆ ಈ ಮುಷ್ಕರದಿಂದಾಗಿ ಸಾರಿಗೆ, ಸರಕು ಸಾಗಾಟ ಹಾಗೂ ಇನ್ನಿತರ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.