ಭಟ್ಕಳ: ಪ್ರವಾದಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಉತ್ತರ ಪ್ರದೇಶದ ಯತಿ ನರಸಿಂಗಾನಂದ ಸ್ವಾಮೀಜಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳದ ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆ ಮಜ್ಲಿಸೆ ಇಸ್ಲಾ-ವ-ತಂಜೀಮ್ ಸಂಸ್ಥೆ ನೀಡಿದ್ದ ಭಟ್ಕಳ ಬಂದ್ ಕರೆಗೆ ಮುಸ್ಲಿಮರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.
ತಂಜೀಮ್ ನೀಡಿದ ಬಂದ್ ಕರೆಗೆ ಎಲ್ಲಾ ಜಮಾಅತ್ ಸಂಘಟನೆಗಳು ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ಭಟ್ಕಳ ಮಾತ್ರವಲ್ಲದೇ ಶಿರಾಲಿ, ಮುರ್ಡೇಶ್ವರ ಗಳಲ್ಲಿಯೂ ಮುಸ್ಲಿಂ ಅಂಗಡಿಗಳು, ಶಾಲೆ ಕಾಲೇಜುಗಳು ಬಂದ್ ಇದ್ದವು.
ಅಲ್ಲದೇ ಅತ್ಯಂತ ತುರ್ತು ಅಗತ್ಯತೆಯನ್ನು ಹೊರತುಪಡಿಸಿ ಯಾರೂ ಕೂಡಾ ಮನೆಯಿಂದ ಹೊರಗೆ ಬಂದು ವ್ಯಾಪಾರ ವ್ಯವಹಾರ ಮಾಡದಂತೆಯೂ ಕೂಡಾ ನಿರ್ಬಂಧ ಹೇರಲಾಗಿದ್ದು, ಮನೆಯಿಂದ ಹೊರ ಬರದೇ ಬಂದ್ ಆಚರಣೆ ಮಾಡಿದರು.
ನಗರದಲ್ಲಿ ಮುಸ್ಲಿಮ ಸಮುದಾಯದವರು ಮಾತ್ರ ಬಂದ್‌ನಲ್ಲಿ ಭಾಗವಹಿಸಿದ್ದು, ಹಿಂದೂ ಸಮುದಾಯದವರ ಅಂಗಡಿ, ವ್ಯಾಪಾರ ಮಳಿಗೆ ಹಾಗೂ ಶಾಲಾ ಕಾಲೇಜುಗಳು, ಸರಕಾರಿ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಭಟ್ಕಳದ ಪ್ರಮುಖ ಮಾರ್ಗಗಳಾದ ಕೇರಿ ರಸ್ತೆ, ಮುಖ್ಯ ರಸ್ತೆ ಹಾಗೂ ಇತರ ವ್ಯಾಪಾರ ಕೇಂದ್ರಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಮುಸ್ಲಿಂ ಆಟೋ ರಿಕ್ಷಾ ಸೇವೆಗಳೂ ಸ್ಥಗಿತಗೊಂಡಿದ್ದವು.
ಆಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದರು. ತಂಝೀಮ್ ಹಾಗೂ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಕಾರ್ಯಕರ್ತರು, ಪುರಸಭಾ ಸದಸ್ಯರು, ಜಾಲಿ ಪ.ಪಂ.ಸದಸ್ಯರು ಸಹ ಸ್ವಯಂ ಸೇವಕರಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಲ್ಲಲ್ಲಿ ನಿಂತು ಸಹಕರಿಸುತ್ತಿರುವುದು ಕಂಡು ಬಂತು.