ಧಾರವಾಡ: ಯಾವುದೇ ರೀತಿಯ ಹಣಕಾಸು ಸಂಸ್ಥೆ, ಬ್ಯಾಂಕರ್‌ಗಳು ತಮ್ಮಲ್ಲಿ ಸಾಲ ಪಡೆದ ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಅಥವಾ ನೋಟಿಸ್ ನೀಡುವ ಮೂಲಕ ವಸೂಲಿಗೆ ಒತ್ತಡ ಹಾಕಿದರೆ ಸರಕಾರದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ರಾಷ್ಟ್ರೀಕೃತ, ವಾಣಿಜ್ಯ ಹಾಗೂ ಕಿರು ಹಣಕಾಸು ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಜರುಗಿಸಿ ಅವರು ಮಾತನಾಡಿದರು. ಆಗಸ್ಟ್ ವರೆಗೆ ಯಾವುದೇ ರೀತಿಯ ಸಾಲಗಾರರಿಂದ ಇಎಂಐ ತುಂಬಲು ಒತ್ತಾಯಿಸುವುದು ಅಥವಾ ಟಾಪ್‌ಅಪ್ ಆಫರ್‌ದಂತ ಆಮಿಷಗಳನ್ನು ಒಡ್ಡುವ ಮೂಲಕ ಒತ್ತಡ, ಮಾನಸಿಕ ಕಿರಿಕಿರಿ ಉಂಟು ಮಾಡಿದ ಬಗ್ಗೆ ದೂರುಗಳು ಬಂದಲ್ಲಿ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿದೆ ಎಂದರು.
ಲೀಡ್‌ಬ್ಯಾಂಕ್ ಮ್ಯಾನೇಜರ್ ಈಶ್ವರನಾಥ ಮಾತನಾಡಿ, ಸರಕಾರ ಹಾಗೂ ಆರ್‌ಬಿಐ ನೀಡುವ ಎಲ್ಲ ನಿರ್ದೇಶನ, ಸುತ್ತೋಲೆಗಳನ್ನು ಕಾಲಕಾಲಕ್ಕೆ ಜಿಲ್ಲೆಯ ಬ್ಯಾಂಕ್ ಶಾಖೆಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರಿಂದ ಯಾವುದೇ ರೀತಿಯ ಸಾಲಗಳ ವಸೂಲಿ ಹಾಗೂ ಇಎಂಐ ತುಂಬುವಂತೆ ಒತ್ತಾಯಿಸಲು ಅವಕಾಶವಿಲ್ಲ. ಸ್ವಯಂ ಪ್ರೇರಣೆಯಿಂದ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇಎಂಐ ತುಂಬಲಿ. ಇದಕ್ಕೆ ಎಲ್ಲ ರೀತಿಯ ಹಣಕಾಸು ಸಂಸ್ಥೆಗಳು ಅವಕಾಶ ಮಾಡಬೇಕು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ಐತಾಳ, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಂಜುನಾಥ ಕೆ., ಬ್ಯಾಂಕ್ ಆಫ್ ಬರೋಡಾ ಧಾರವಾಡ ಶಾಖೆಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಬೆಲ್ಲದ, ನಬಾರ್ಡ್ ಜಿಲ್ಲಾ ಉಪ ವ್ಯವಸ್ಥಾಪಕಿ ಶೀಲಾ ಭಂಡಾರಕರ, ಕಿರುಹಣಕಾಸು ಸೇವಾ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಇನ್ನಿತರರಿದ್ದರು.
ಸಾಲ ವಸೂಲಿ ಸಂಬಂಧ ಒತ್ತಡ-ಕಿರಿಕಿರಿ ಕುರಿತು ಹಲವಾರು ಗ್ರಾಹಕರು ಲೀಡ್‌ಬ್ಯಾಂಕ್‌ಗೆ ದೂರು ನೀಡುತ್ತಿದ್ದಾರೆ. ಲೀಡ್‌ಬ್ಯಾಂಕ್ ಮೂಲಕ ಅಗತ್ಯ ಮಾಹಿತಿಯನ್ನು ಎಲ್ಲಾ ಬ್ಯಾಂಕ್‌ನ ಶಾಖೆಗಳಿಗೆ ಈಗಾಗಲೇ ತಲುಪಿಸಲಾಗಿದೆ. ಇದರ ಹೊರತಾಗಿಯೂ ಗ್ರಾಹಕರಿಂದ ಒತ್ತಾಯದ ವಸೂಲಾತಿ ಕುರಿತು ನಿದಿ ìಷ್ಟ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.
-ದೀಪಾ ಚೋಳನ್, ಜಿಲ್ಲಾಧಿಕಾರಿ
ಕಿರು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಹೊಸ ಯೋಜನೆಗಳ ಕುರಿತು ಸಾರ್ವಜನಿಕವಾಗಿ ಮಾಹಿತಿ ನೀಡಿ ಪ್ರಕಟಿಸಲಿ. ಆದರೆ ಸಾಲ ವಸೂಲಾತಿ, ಹೊಸ ಸಾಲದ ಬಗ್ಗೆ ಈ ಸಂದರ್ಭದಲ್ಲಿ ವೈಯಕ್ತಿಕ ಕರೆ ಮಾಡುವ ಅಗತ್ಯವಿಲ್ಲ.
– ಡಾ| ಬಿ.ಸಿ. ಸತೀಶ, ಜಿಪಂ ಸಿಇಒ