Advertisement

ಬಂಕಾಪುರ:ರುದ್ರಮುನಿ ಶ್ರೀ ಸುವರ್ಣ ಪುಣ್ಯಸ್ಮರಣೋತ್ಸವ

06:05 PM Feb 03, 2024 | Team Udayavani |

ಉದಯವಾಣಿ ಸಮಾಚಾರ
ಬಂಕಾಪುರ: ಪಟ್ಟಣದ ಅರಳೆಲೆ ಮಠದ 99ನೇ ಪೀಠಾಧಿಪತಿಗಳಾಗಿದ್ದ ಲಿಂ| ರುದ್ರಮುನಿ ಶಿವಾಚಾರ್ಯರ ಸುವರ್ಣ
ಪುಣ್ಯಸ್ಮರಣೋತ್ಸವ ಅಂಗವಾಗಿ ಫೆ.3ರಿಂದ 5ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 3ರ ಬೆಳಗ್ಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಹೊರಡಲಿರುವ ಶ್ರೀ ವೀರಭದ್ರಸ್ವಾಮಿ ಗುಗ್ಗಳ ಮಹೋತ್ಸವಕ್ಕೆ ಅರಳೆಲೆ ಮಠದ ಶ್ರೀ ರೇವಣಸಿದ್ದೇಶ್ವರ ಶ್ರೀಗಳು ಚಾಲನೆ ನೀಡುವರು.

Advertisement

4ರ ಬೆಳಗ್ಗೆ 8 ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ
ಭಗವತ್ಪಾದರಿಂದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಸಂಜೆ 6 ಗಂಟೆಗೆ  ನಡೆಯಲಿರುವ ಧರ್ಮ ಜಾಗೃತಿ ಭಾವೈಕ್ಯ ಸಮಾರಂಭದ  ಸಾನ್ನಿಧ್ಯವನ್ನು ರಂಭಾಪುರಿ ಜಗದ್ಗುರು ವಹಿಸುವರು. ನೇತೃತ್ವವನ್ನು ಅರಳೆಲೆ ಮಠದ ಶ್ರೀಗಳು ವಹಿಸುವರು.

ಜವಳಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಂಸದ ಮಂಜುನಾಥ
ಕುನ್ನೂರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಇನ್ನಿತರರು ಭಾಗವಹಿಸುವರು.
5ರ ಸಂಜೆ 4 ಗಂಟೆಗೆ ನಡೆಯಲಿರುವ ಧರ್ಮಸಭೆಯ ಸಾನ್ನಿಧ್ಯವನ್ನು ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ವಹಿಸುವರು.

ನೇತೃತ್ವವನ್ನು ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ವಹಿಸುವರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚರಿತಾಮೃತ ಕೃತಿ ಬಿಡುಗಡೆಗೊಳಿಸುವರು. ಸಭಾಪತಿ
ಬಸವರಾಜ ಹೊರಟ್ಟಿ ಸೇರಿದಂತೆ ಗಣ್ಯಮಾನ್ಯರು ಪಾಲ್ಗೊಳ್ಳುವರು.

ಭಕ್ತರ ಬಾಳಿನ ಆಶಾಜ್ಯೋತಿ
ಅರಳೆಲೆ ಮಠಕ್ಕೆ ಸಾವಿರ ವರ್ಷಗಳ ಇತಿಹಾಸವಿದ್ದು, ನೂರು ದಾರ್ಶನಿಕ ಮಠಾಧೀಶರನ್ನು ಕಂಡಿದೆ. 99ನೇ ಪೀಠಾ ಧಿಪತಿಗಳಾಗಿದ್ದ ಲಿಂ| ರುದ್ರಮುನಿ ಶಿವಾಚಾರ್ಯರು ಪೂಜಾ ನಿಷ್ಠರು, ಮಹಾತಪಸ್ವಿಗಳಾಗಿದ್ದರು. ಜೀವಿತಾವಧಿಯಲ್ಲಿ
ಭಕ್ತರೇ ಸರ್ವಸ್ವ ಎಂದು ತಿಳಿದು, ಕಾಲ್ನಡಿಗೆಯ ಮೂಲಕ ಹಳ್ಳಿ ಹಳ್ಳಿಗಳಿಗೆ ತೆರಳಿ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡುವ ಶಕ್ತಿ
ಪಡೆದವರಾಗಿದ್ದರು. ಭಕ್ತರಿಗೆ ಆರೋಗ್ಯ ಸಮಸ್ಯೆಯಾದಾಗ ಉಚಿತವಾಗಿ ಗಿಡಮೂಲಿಕೆ ಔಷಧ ನೀಡಿ ಆರೋಗ್ಯವನ್ನು ಕರುಣಿಸುವ, ನಡೆದಾಡುವ ದೇವರಾಗಿ ಭಕ್ತರ ಬಾಳಿನಲ್ಲಿ ಬೆಳಕು ನೀಡುವ ಆಶಾಜ್ಯೋತಿಯಾಗಿ ಪರಿಣಮಿಸಿದ್ದರು. ಸತ್ವಶಾಲಿ,
ತತ್ವಬದ್ಧ ಸಮಾಜ ನಿರ್ಮಾಣಕ್ಕಾಗಿ ಆಚಾರ, ವಿಚಾರ, ರೀತಿ, ನೀತಿ ಬೋಧಿಸುವ ಮೂಲಕ ಭಕ್ತರಿಗೆ ಧರ್ಮದ ಸವಿಜೇನನ್ನು ಉಣಬಡಿಸಿದ ಮಹಾಚೇತನರಾಗಿದ್ದರು.

Advertisement

ಅಂತಹ ದೇವಸ್ವರೂಪಿಗಳ ಸುವರ್ಣ ಪುಣ್ಯಸ್ಮರಣೋತ್ಸವ ಭಕ್ತಕೋಟಿಯಿಂದ ಈಗ ನಡೆಯುತ್ತಿದೆ. ಅರಳೆಲೆಮಠ ಖಾಸಾ ಶಾಖಾಮಠವಾಗಿದ್ದು, ಶ್ರೀ ಮಠಕ್ಕೆ ನೂರನೇ ಪೀಠಾಧಿಪತಿಗಳಾಗಿ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿಯವರು, ಕರ್ತೃ ಲಿಂ| ರುದ್ರಮುನೀಶ್ವರರ ಆಶೀರ್ವಾದ  ಶಕ್ತಿ ಪಡೆದು ಭಕ್ತರನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ ರೇವಣಸಿದ್ದೇಶ್ವರ ಶ್ರೀಗಳು ಕೃಷಿ ಕಾಯಕಯೋಗಿಗಳಾಗಿ ವೀರಶೈವ ಲಿಂಗಾಯತ ಧರ್ಮದ ಬೇರುಗಳನ್ನು ಗಟ್ಟಿಗೊಳಿಸಲು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿರಿಸಿದ್ದಾರೆ.

ಸದಾಶಿವ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next