ಹೊಸದಿಲ್ಲಿ : ಸಾರ್ವಜನಿಕ ರಂಗದ ಬ್ಯಾಂಕುಗಳು ನೌಕರರು ಮುಖ್ಯವಾಗಿ ಸೇರಿರುವಂತೆ ಹತ್ತು ಲಕ್ಷ ಬ್ಯಾಂಕ್ ಉದ್ಯೋಗಿಗಳು ಇಂದು ಬುಧವಾರ (ಮೇ 30) ದಿಂದ ಎರಡು ದಿನಗಳ ಮುಷ್ಕರಕ್ಕೆ ತೊಡಗಿಕೊಂಡ ಕಾರಣ ದೇಶಾದ್ಯಂತ ಸರಕಾರಿ ಒಡೆತನದ ಬ್ಯಾಂಕುಗಳ ಸೇವೆಯಲ್ಲಿ ತೀವ್ರ ಅಡಚಣೆ ಕಂಡು ಬಂತು.
ಬ್ಯಾಂಕ್ ನೌಕರರ ಮಾಸಿಕ ವೇತನವನ್ನು ಕೇವಲ ಶೇ.2ರಷ್ಟು ಏರಿಸುವ ಪ್ರಸ್ತಾವವನ್ನು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ (ಐಬಿಎ) ಮುಂದಿಟ್ಟಿರುವುದನ್ನು ಪ್ರತಿಭಟಿಸಿ ಬ್ಯಾಂಕ್ ಉದ್ಯೋಗಿಗಳು ಎರಡು ದಿನಗಳ ದೇಶ ವ್ಯಾಪಿ ಮುಷ್ಕರದಲ್ಲಿ ತೊಡಗಿದ್ದಾರೆ.
ಹಳೇ ತಲೆಮಾರಿನ ಖಾಸಗಿ ರಂಗದ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕಗುಳ ನೌಕರರ ಬೆಂಬಲದಲ್ಲಿ ನಾಳೆ (ಮೇ 31ರಂದು) ಕೂಡ ನಡೆಯಲಿರುವ ಈ ಮುಷ್ಕರಿಂದ ಉಂಟಾಗಿರುವ ಸೇವೆಯಲ್ಲಿನ ಅಡಚಣೆ ನಾಳೆಯೂ ಗ್ರಾಹಕರನ್ನು ಬಾಧಿಸಲಿದೆ.
ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಾದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್‌ಗಳಲ್ಲಿ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಕೆಲವೇ ಕೆಲವು ಚಟುವಟಿಕೆಗಳನ್ನು ಹೊರತು ಪಡಿಸಿ, ಉಳಿದೆಲ್ಲ ಚಟುವಟಿಕೆಗಳು ಎಂದಿನಂತೆ ಮಾಮೂಲಿಯಾಗಿ ಸಾಗಿದವು.
ಕೇರಳ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಜಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ಬ್ಯಾಂಕ್ ಮುಷ್ಕರದ ಬಿಸಿ ಗ್ರಾಹಕರನ್ನು ತೀವ್ರವಾಗಿ ತಟ್ಟಿತು.
ಎರಡು ದಿನಗಳ ಬ್ಯಾಂಕ್ ಮುಷ್ಕರದಿಂದಾಗಿ ಸುಮಾರು 20,000 ಕೋಟಿ ರೂ. ಗಳ ವಹಿವಾಟಿನ ಮೇಲೆ ಪರಿಣಾಮವಾಗು ಸಾಧ್ಯತೆ ಇದೆ ಎಂದು ಆಸೋಚಾಮ್ ಹೇಳಿದೆ.