Advertisement

ಬ್ಯಾಂಕ್‌ ಅಧಿಕಾರಿಗಳೇ, ಬೇಜವಾಬ್ದಾರಿ ಸಲ್ಲ

12:07 PM Jul 25, 2017 | |

ಧಾರವಾಡ: ಬೆಳೆವಿಮೆ, ಬೆಳೆಹಾನಿ ಪರಿಹಾರ, ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಬ್ಯಾಂಕ್‌ ಗಳು ಅಸಹಕಾರ ತೋರುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

Advertisement

ಜಿಪಂ ಸಭಾಂಗಣದಲ್ಲಿ 1ನೇ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈತರು ಬರಗಾಲದಿಂದ ತೊಂದರೆಯಲ್ಲಿದ್ದಾರೆ. ಅವರ ಖಾತೆಗಳಿಗೆ ಸರ್ಕಾರ ವಿವಿಧ ಯೋಜನೆಗಳ ಮೂಲಕ ಹಾಕಿದ ಹಣ ನೀಡದೆ ಬ್ಯಾಂಕ್‌ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. 

ಇದು ಹೀಗೆ ಮುಂದುವರಿದರೆ ರೈತರು ನಿಮ್ಮ ಬ್ಯಾಂಕ್‌ಗಳಿಗೆ ಮುತ್ತಿಗೆ ಹಾಕುತ್ತಾರೆ ಎಚ್ಚರವಾಗಿರಿ. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಕಟ್ಟುನಿಟ್ಟಿನ ಆದೇಶ ಮಾಡಿದರು. ಅರಣ್ಯ ಇಲಾಖೆ ಕಲಘಟಗಿ ತಾಲೂಕಿನಲ್ಲಿ ಕೆಲಸ ಮಾಡದೆ ಹಣ ಲೂಟಿ ಮಾಡಿರುವದು ಕುರಿತು ಗಮನಕ್ಕೆ ಬಂದಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಷ್ಟು ಸಸಿ ನೆಡಲಾಗಿದೆ. ಎಷ್ಟು ಹಣ ಖರ್ಚಾಗಿದೆ ಎನ್ನುವ ಮಾಹಿತಿ 2 ದಿನದಲ್ಲಿ ನೀಡಬೇಕು. ಅರಣ್ಯ ಪ್ರದೇಶದ ಕೆರೆಗಳ ಹೂಳೆತ್ತುವ ಕಾರ್ಯ ಯಾಕೆ ಮಾಡಿಲ್ಲ ಎಂದು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಕ್ರಿಮಿನಲ್‌ ಕೇಸ್‌: ಜಿಲ್ಲೆಯಲ್ಲಿ ಬ್ಯಾಂಕ್‌ಗಳ ಅಸಮರ್ಪಕ ಕಾರ್ಯವೈಖರಿ ಕುರಿತು ಲೀಡ್‌ ಬ್ಯಾಂಕ್‌ ಅಧ್ಯಕ್ಷ ವಿಜಯಕುಮಾರ್‌ ಅವರನ್ನು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ತರಾಟೆಗೆ ತೆಗೆದುಕೊಂಡರು. ಸಾಲ ಮಾಡದೆ ಇರುವ ರೈತರು ಮತ್ತು ಸಾಲ ಮಾಡಿದ ರೈತರು ಯಾರೇ ಇರಲಿ ಎಲ್ಲರಿಗೂ ಬೆಳೆವಿಮೆ ಇರಿಸಲು ಅವಕಾಶ ಮಾಡಿಕೊಡಬೇಕು.

Advertisement

ಸಾಮಾಜಿಕ ಪಿಂಚಿಣಿ, ಬೆಳೆವಿಮೆ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ ಮುಂದುವರಿದರೆ ಅಂತಹ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುತ್ತೇನೆ. ಆಗಿರುವ ಪ್ರಮಾದವನ್ನು 7 ದಿನಗಳಲ್ಲಿ ಸರಿಪಡಿಸುವಂತೆ ಎಚ್ಚರಿಸಿದರು. 

ಶಾಸಕ ಸಿ.ಎಸ್‌. ಶಿವಳ್ಳಿ ಮಾತನಾಡಿ, ಕುಂದಗೋಳ ತಾಲೂಕಿನಲ್ಲಿ ಜನಸಾಮಾನ್ಯರಿಗೆ ನೀಡುವ ಪಿಂಚಿಣಿ ಯೋಜನೆ ಮತ್ತು ಮೆಣಸಿನಕಾಯಿ ಬೆಳೆಗೆ ಸರಿಯಾಗಿ ಬೆಳೆವಿಮೆ ಲಭಿಸಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. 

ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಶುದ್ಧ ಕುಡಿವ ನೀರಿನ ಘಟಕಗಳನ್ನು ಸರಿಪಡಿಸುವಂತೆ ಎಷ್ಟು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವರನ್ನು ಒತ್ತಾಯಿಸಿದರು. ವಿಪ ಸದಸ್ಯ ಶ್ರೀನಿವಾಸ ಮಾನೆ, ಎಸ್ಪಿ ಜಿ. ಸಂಗೀತಾ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next