ಮುಜಫರನಗರ: ಉತ್ತರ ಪ್ರದೇಶದ
ಶಾಮ್ಲಿ ಜಿಲ್ಲೆಯಲ್ಲಿ ಎಟಿಎಂ ಒಂದರಿಂದ 18 ಲಕ್ಷ ರೂ. ಎಗರಿಸಿದ ಓವರ್‌ಸೀಸ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಎಟಿಎಂ ನಿಂದ 18 ಲಕ್ಷ ರೂ. ಲಪಟಾಯಿಸಿ ನಾಪತ್ತೆಯಾಗಿದ್ದ ಓವರ್‌ಸೀಸ್ ಬ್ಯಾಂಕ್ ಶಾಖಾ ಮ್ಯಾನೇಜರ್ ರಾಬಿನ್ ಬನ್ಸಾಲ್ ನನ್ನು ಪೊಲೀಸರು ಇಂದು ಶನಿವಾರ ಪತ್ತೆ ಹಚ್ಚಿ ಬಂಧಿಸಿ ಆತನ ವಶದಲ್ಲಿ 14 ಲಕ್ಷ ರೂ.ಗಳನ್ನು ವಶಪಡಿಸಿಕೊಂಡರು ಎಂದು ಪೊಲೀಸ್ ಸುಪರಿಂಟೆಂಡೆಂಟ್ ದಿನೇಶ್ ಕುಮಾರ್ ಹೇಳಿದರು.
ಬಂಟಿಖೇಡ ಗ್ರಾಮದ ಓವರ್ ಸೀಸ್ ಬ್ಯಾಂಕ್ ಶಾಖೆಯ ಪ್ರಬಂಧಕ ಬನ್ಸಾಲ್ ಕಳೆದ ಮಾರ್ಚ್ 4ರಂದು ಶಾಮ್ಲಿ ಜಿಲ್ಲೆಯಲ್ಲಿನ ಎಟಿಎಂ ನಿಂದ 18 ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದ. ಆತನೊಂದಿಗೆ ಇನ್ನೋರ್ವ ಆರೋಪಿ ಚೇತನ್ ಎಂಬಾತನನ್ನು ಕೂಡ ಪೊಲೀಸರು ಬಂಧಿಸಿದರು.
ಮ್ಯಾನೇಜರ್ ಬನ್ಸಾಲ್, ತನ್ನ ಸಹಚರ ಚೇತನ್‌ಗೆ ಪಾಸ್ ವರ್ಡ್ ನೀಡಿ ಎಟಿಎಂ ಯಂತ್ರವನ್ನು ತರೆಯುವ ತಾಂತ್ರಿಕ ಉಪಾಯವನ್ನು ತಿಳಿಸಿದ್ದ.
ಈ ಪ್ರಕರಣದ ತನಿಖೆಯ ವೇಳೆ ಪೊಲೀಸರು ಬಂಟಿಖೇಡ ಗ್ರಾಮದ ಓವರ್‌ಸೀಸ್ ಬ್ಯಾಂಕ್ ಶಾಖೆಯಲ್ಲಿ 4 ಕೋಟಿ ರೂ.ಗಳ ಹಗರಣ ನಡೆದಿರುವುದು ಕೂಡ ಪತ್ತೆ ಹಚ್ಚಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.