ಬಾಗಲಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖೀಲ ಭಾರತ ಬ್ಯಾಂಕ್ ನೌಕರರು ಎರಡು ದಿನಗಳ ಮುಷ್ಕರ ನಡೆಸುತ್ತಿದ್ದು, ಗ್ರಾಹಕರು ಪರದಾಡುವಂತಾಯಿತು.
ಕಳೆದ ನಾಲ್ಕು ದಿನಗಳಿಂದ ಬ್ಯಾಂಕ್‌ಗಳ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿವೆ. ಕೊನೆಯ ಶನಿವಾರ, ರವಿವಾರ ರಜೆ ಇದ್ದವು. ಅಲ್ಲದೇ ಸೋಮವಾರ ಮತ್ತು ಮಂಗಳವಾರ ಎರಡು ದಿನ ನೌಕರರು ಮುಷ್ಕರಕ್ಕೆ ಕಡೆ ನೀಡಿದ್ದಾರೆ.
ನೌಕರರ ಮುಷ್ಕರದ ಕುರಿತು ಗೊತ್ತಿಲ್ಲದೇ ಗ್ರಾಹಕರು ಬ್ಯಾಂಕ್‌ನತ್ತ ಆಗಮಿಸಿ, ನಿರಾಸೆಯಿಂದ ಮರಳಿದರು. ಮುಖ್ಯವಾಗಿ ಕೇಂದ್ರೀಯ ವಿದ್ಯಾಲಯ ಸಹಿತ ವಿವಿಧ ಶಾಲೆಗಳ ಮಕ್ಕಳ ಶಾಲಾ ಶುಲ್ಕ ಪಾವತಿ, ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಿದ್ದು, ಮಾರ್ಚ್ ಕೊನೆ ಆಗಿದ್ದರಿಂದ ಆನ್‌ಲೈನ್ ವ್ಯವಸ್ಥೆ ಕೂಡ ಸ್ಥಗಿತಗೊಂಡಿದೆ. ಹೀಗಾಗಿ ಹಲವಾರು ಪಾಲಕರು, ವಿದ್ಯಾಗಿರಿಯ ಯೂನಿಯನ್ ಬ್ಯಾಂಕ್ ಶಾಖೆಗೆ ಆಗಮಿಸಿ, ಶುಲ್ಕ ಪಾವತಿಸಲಾಗದೇ ಮರಳಿದರು.
ಬೇಡಿಕೆ ಈಡೇರಿಕೆಗೆ ಒತ್ತಾಯ: ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಆನಂದ ಕುಲಕರ್ಣಿ ನೇತೃತ್ವದಲ್ಲಿ ವಿದ್ಯಾಗಿರಿಯ ಬ್ಯಾಂಕ್ ಆಫ್ ಬರೋಡಾ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿ, ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಸಾರ್ವಜನಿಕರಿಗೆ ಆರ್ಥಿಕ ಸಹಕಾರ ನೀಡುವ ಬ್ಯಾಂಕ್ ಬಲಪಡಿಸಬೇಕು, ಖಾಸಗೀಕರಣ ನಿಲ್ಲಿಸಬೇಕು. ಕಟಬಾಕಿ ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು. ಬ್ಯಾಂಕ್‌ನ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಿಸಬೇಕು. ಹೆಚ್ಚಿನ ಸೇವಾ ಶುಲ್ಕಗಳನ್ನು ಕಡಿಮೆ ಮಾಡಿ, ಗ್ರಾಹಕರಿಗೆ ಹೊರೆಯಾಗದಂತೆ ನಿಯಮ ರೂಪಿಸಬೇಕು. ಎನ್‌ಪಿಎಸ್ ರದ್ದುಪಡಿಸಿ, ಡಿಎ ಲಿಂಕ್ಡ್ ಪಿಂಚಣಿ ಯೋಜನೆ ಪುನಃ ಆರಂಭಿಸಬೇಕು. ಹೊರ ಗುತ್ತಿಗೆ ನಿಲ್ಲಿಸಿ, ನೇಮಕಾತಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಸಂಗಮ್, ಪ್ರಮುಖರಾದ ಮಂಜುನಾಥ ಬಿರಾದಾರ, ಶಿವಶಂಕರ ಮುದಗಲ್, ಅಂಜನ ಝಳಕಿ, ಶ್ರೀಮಂತ ನೀರಗುದಿ, ಶರಣು ಅಂಟಿನ್, ರಾಘವೇಂದ್ರ ಧಾಮಜಿ, ಸುಮಿತ ಜೂಜಿನ, ಹರ್ಷವರ್ಧನ ಹಣಮಂತ ಕದಾಂಪುರ, ಪ್ರವೀಣ ಕುದರಿ ಸೇರಿದಂತೆ ನೂರಾರು ಜನ ಬ್ಯಾಂಕ್‌ನ ನೌಕರರು ಪಾಲ್ಗೊಂಡಿದ್ದರು.