ಮೈಸೂರು: ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ಹೆಸರಿನಲ್ಲಿ ಹೊರತಂದಿರುವ ಹೊಸ ಕ್ರಮಗಳು ಹಾಗೂ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಿಲುವನ್ನು ಖಂಡಿಸಿ ಬ್ಯಾಂಕ್ ನೌಕರರು ದೇಶವ್ಯಾಪಿ ನಡೆಸಿದ ಮುಷ್ಕರದ ಹಿನ್ನೆಲೆಯಲ್ಲಿ ನಗರದ ವಿವಿಧ ಬ್ಯಾಂಕ್‌ಗಳ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸರಸ್ವತಿಪುರಂನಲ್ಲಿರುವ ಎಸ್‌ಬಿಐ ಕೇಂದ್ರ ಕಚೇರಿ ಎದುರು ಯುನೈಟೆಡ್ ಪೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್ಬಿಯು) ಸಂಘಟನೆ ನೇತೃತ್ವದಲ್ಲಿ ಜಮಾಯಿಸಿದ ಬ್ಯಾಂಕ್ ನೌಕರರು, ದೇಶದಲ್ಲಿ ಪ್ರಸ್ತುತ 56 ಪ್ರಾದೇಶಿಕ, ಗ್ರಾಮೀಣ ಬ್ಯಾಂಕ್‌ಗಳು ಸೇರಿ 20 ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಇವೆ.
ದೇಶದ ಒಟ್ಟು ಬ್ಯಾಂಕಿಂಗ್ ವ್ಯವಹಾರದ ಶೇ.80 ವಹಿವಾಟನ್ನು ಈ ಬ್ಯಾಂಕ್‌ಗಳು ನಡೆಸುತ್ತಿದ್ದು, ಹೀಗಿದ್ದರೂ ಈ ಬ್ಯಾಂಕ್‌ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇದರಿಂದ ಸಾಕಷ್ಟು ಶಾಖೆಗಳು ಮುಚ್ಚುವುರಿಂದ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಲಿದೆ. ಅಲ್ಲದೆ ಬ್ಯಾಂಕ್‌ಗಳ ಖಾಸಗೀಕರಣದಿಂದ ಬ್ಯಾಂಕ್ ಉದ್ಯೋಗಿಗಳು ಸಾಕಷ್ಟು ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ಬ್ಯಾಂಕ್‌ಗಳ ವಿಲೀನ ಪ್ರಸ್ತಾಪಕ್ಕೆ ನಮ್ಮ ವಿರೋಧವಿದ್ದು, ಹೀಗಾಗಿ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕ್‌ಗಳು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿವೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಎಪ್‌ಆರ್‌ಡಿಐ ಬಿಲ್ ವಾಪಸ್ ಪಡೆಯಬೇಕು.
ಪ್ರಸಿದ್ಧ ಖಾಸಗಿ ಕಂಪನಿಗಳು ಬ್ಯಾಂಕ್‌ನಿಂದ ಪಡೆದಿರುವ ಸಾಲ ಮನ್ನಾ ಮಾಡಬಾರದು. ಗ್ರಾಹಕರ ಮೇಲೆ ಹೇರಿರುವ ಸೇವಾ ಶುಲ್ಕವನ್ನು ವಾಪಸ್ ಪಡೆಯಬೇಕು. ವಸೂಲಾಗದ ಸಾಲಗಳ ಮರು ಪಾವತಿಗಾಗಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಾರ್ವಜನಿಕರ ಪರದಾಟ: ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಆ.24 ಮತ್ತು 25ರಂದು ಬ್ಯಾಂಕ್‌ಗಳಿಗೆ ರಜೆ ಇರುವುದರಿಂದ ಬ್ಯಾಂಕಿಂಗ್ ವಹಿವಾಟು ನಡೆಸಲು ಕೆಲಮ ಗ್ರಾಹಕರು ಬ್ಯಾಂಕ್‌ಗಳಿಗೆ ಬಂದಿದ್ದರು.
ಆದರೆ, ವಿವಿಧ ಬೇಡಿಕೆ ಈಡೇರಿಗೆಗಾಗಿ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ ಪರಿಣಾಮ ಖಾಸಗಿ ಹೊರತುಪಡಿಸಿ ಎಲ್ಲಾ ರಾಷ್ಟ್ರೀಕೃತ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಬಂದ್ ಆಗಿತ್ತು. ಇದರಿಂದ ಬೇಸತ್ತ ಕೆಲವು ಸಾರ್ವಜನಿಕರು ಬ್ಯಾಂಕಿಂಗ್ ವಹಿವಾಟು ನಡೆಸಲಾಗದೆ ಹಿಂದಿರುಗಬೇಕಾಯಿತು.