Advertisement

ಬ್ಯಾಂಕ್‌ ನೌಕರರ ಮುಷ್ಕರ: ವಹಿವಾಟು ಅಸ್ತವ್ಯಸ್ತ

01:18 PM May 31, 2018 | |

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ನೌಕರರ ಸಂಘಗಳ ಸಂಯುಕ್ತ ವೇದಿಕೆಯು ನೀಡಿರುವ ಕರೆಯಂತೆ ಬ್ಯಾಂಕ್‌ ನೌಕರರು ಬುಧವಾರ ಬ್ಯಾಂಕ್‌ಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಬ್ಯಾಂಕ್‌ ನೌಕರರ ಮುಷ್ಕರದಿಂದ ಹಣಕಾಸು ಚಲಾವಣೆಯಲ್ಲಿ ವ್ಯತ್ಯಯವುಂಟಾಗಿರುವುದರಿಂದ ವ್ಯಾಪಾರ, ವಹಿವಾಟು ಅಸ್ತವ್ಯಸ್ತವಾಗಿದೆ.

Advertisement

ನಗರದ ಎನ್‌.ಆರ್‌.ವೃತ್ತದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಪ್ರಧಾನ ಶಾಖೆ ಬಳಿ ಸಮಾವೇಶಗೊಂಡ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ನೌಕರರನ್ನುದ್ದೇಶಿಸಿ ಮಾತನಾಡಿದ ಬ್ಯಾಂಕ್‌ ನೌಕರರ ಸಂಘದ ಪದಾಧಿಕಾರಿಗಳು, 2017 ನ.1 ರಿಂದ ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆ ಬಾಕಿಯಿದೆ. ಕೇಂದ್ರ ಸರ್ಕಾರವು ಈ ಅವಧಿಯೊಳಗೆ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಭಾರತೀಯ ಬ್ಯಾಂಕ್‌ ಸಂಘಕ್ಕೆ (ಐಬಿಎ)ಹಿಂದೆಯೇ ತಾಕೀತು ಮಾಡಲಾಗಿತ್ತು.

ಬ್ಯಾಂಕ್‌ ಸಿಬ್ಬಂದಿ ಸಂಘದ ಒಕ್ಕೂಟವು 2017ರ ಮೇ ತಿಂಗಳಲ್ಲಿಯೇ ತನ್ನ ಬೇಡಿಕೆಯನ್ನು ಐಬಿಎಗೆ ಸಲ್ಲಿಸಿ ಅವರೊಂದಿಗೆ ಮಾತುಕತೆಯನ್ನು ಪ್ರಾರಂಭಿಸಿತು. ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಸುತ್ತಿನ ಮಾತುಕತೆಯ ಹೊರತಾಗಿಯೂ ಐಬಿಎ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಯಾವುದೇ ತರಹದ ಪ್ರಸ್ತಾಪವನ್ನು ಮುಂದೆ ಇಡಲಿಲ್ಲ. ಇತ್ತಿಚಿಗೆ ಮೇ 5 ರಂದು ಐಬಿಎ ಬ್ಯಾಂಕುಗಳ ದುರ್ಬಲ ಹಣಕಾಸು ಪರಿಸ್ಥಿತಿಯ ನೆಪ ನೀಡಿ ಕೇವಲ ಶೇ.2 ರಷ್ಟು ವೇತನ ವೃದ್ಧಿಯ ಪ್ರಸ್ತಾಪವನ್ನು ಮುಂದಿಟ್ಟಿತು. 

ಕೇವಲ ತೃತೀಯ ಶ್ರೇಣಿಯ ಸಿಬ್ಬಂದಿ ವರ್ಗಕ್ಕೆ ಮಾತ್ರ ಪರಿಷ್ಕರಣೆ ಸೀಮಿತಗೊಳಿಸುವುದಾಗಿ ಪ್ರಸ್ತಾಪ ಸಲ್ಲಿಸಿದೆ. 1979 ರಿಂದಲೂ ಪ್ರತಿ ವೇತನ ಸಂಬಂಧಿ ದ್ವಿಪಕ್ಷೀಯ ಒಡಂಬಡಿಕೆಯು 8ನೇ ಶ್ರೇಣಿಯವರೆಗಿನ ಎಲ್ಲಾ ಸಿಬ್ಬಂದಿಯನ್ನೂ ಒಳಗೊಂಡಿತ್ತು. ಆದರೆ ಇಂದು ಐಬಿಎ ಇದನ್ನು ಕೇವಲ ಮೂರು ಶ್ರೇಣಿಗೆ ಸೀಮಿತಗೊಳಿಸುವ ಉದ್ದೇಶ ಹೊಂದಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಬ್ಯಾಂಕ್‌ ನೌಕರರ ಒಕ್ಕೂಟವು ಐಬಿಎಯ ಪ್ರಸ್ತಾಪಗಳನ್ನು ವಿರೋಧಿಸಿ ಮೇ 30 ಹಾಗೂ 31 ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮುಖ್ಯ ಕಾರ್ಮಿಕ ಆಯುಕ್ತರು ದೆಹಲಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಐಬಿಎ ಹಣಕಾಸು ಮಂತ್ರಾಲಯ ಪ್ರತಿನಿಧಿ ಹಾಗೂ ನಮ್ಮ ಒಕ್ಕೂಟದ ನಡುವೇ ಸಂಧಾನ ಸಭೆಗೆ ಸಿದ್ಧ ಮಾಡಿದರು.

Advertisement

ಸಭೆಯಲ್ಲಿ ಐಬಿಎ ಪ್ರಸ್ತಾಪಿಸಿದ್ದ ಶೇ.2ರ ಆಧಾರ ರಹಿತ ವೇತನ ವೃದ್ಧಿಯನ್ನು ಯಾವುದೇ ಕಾರಣಕ್ಕೂ ಬ್ಯಾಂಕ್‌ ನೌಕರರ ಒಕ್ಕೂಟವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
 
ಎಲ್ಲಾ ಬ್ಯಾಂಕುಗಳೂ ಲಾಭಗಳಿಸುತ್ತಿದ್ದು, 2016-17ರ ಸಾಲಿನಲ್ಲಿ ಲಾಭದ ಮೊತ್ತ 1,59,000 ಕೋಟಿಗಳಷ್ಟಾಗಿದೆ. ವಸೂಲಾಗದ ಸಾಲದ ಬಾಬಿಗೆ ಹೊಂದಿಸಿ ಬ್ಯಾಂಕುಗಳು ನಷ್ಟದಲ್ಲಿವೆ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಅಂಕಿ-ಅಂಶವನ್ನು ತಿರುಚಿ ನಷ್ಟದ ಬಾಬನ್ನು ಬಿಂಬಿಸಿ ನ್ಯಾಯಯುತ ವೇತನ ಪರಿಷ್ಕರಣೆ ನಿರಾಕರಿಸುವುದು ಅನ್ಯಾಯ. ಹಿಂದಿನಂತೆ ವೇತನ ಪರಿಷ್ಕರಣೆಯು 8ನೇ ಶ್ರೇಣಿವರೆಗೂ ಎಲ್ಲಾ ಸಿಬ್ಬಂದಿ ಒಳಪಡಬೇಕು ಎಂಬ ಒತ್ತಾಯದ ಬಗ್ಗೆ ಪರಿಶೀಲಿಸಿ ಮುಷ್ಕರವನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಮುಖ್ಯ ಆಯುಕ್ತರು ಐಬಿಎಗೆ ಸಲಹೆ ಮಾಡಿದ್ದರು. ಆಯುಕ್ತರ ಸಲಹೆಯಂತೆ ಪರಿಷ್ಕೃತ ಪ್ರಸ್ತಾಪವನ್ನು ಪ್ರಕಟಿಸಲು ಐಬಿಎಗೆ ಮನವಿ ಮಾಡಿದರೂ ಸಕರಾತ್ಮಕ ಪ್ರತಿಕ್ರಿಯೆ ದೊರೆಯಲಿಲ್ಲ. ಹಾಗಾಗಿ ಎರಡು ದಿನಗಳ ಕಾಲ
ಬ್ಯಾಂಕ್‌ ಮುಷ್ಕರ ಹಮ್ಮಿಕೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕರಿಗೆ ಮತ್ತು ಬ್ಯಾಂಕ್‌ ಗ್ರಾಹಕರಿಗೆ ಉಂಟಾಗಿರುವ ಅನಾನುಕೂಲಕ್ಕೆ ಬ್ಯಾಂಕ್‌ ನೌಕರರ ಸಂಘಗಳ ಸಂಯುಕ್ತ ವೇದಿಕೆಯು ವಿಷಾದ ವ್ಯಕ್ತಪಡಿಸಲಿದೆ ಎಂದೂ ಹೇಳಿದರು. ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ನೌಕರರ ಸಂಘದ ಸಂಚಾಲಕ ಆರ್‌.ಕುಮಾರ್‌, ವಲಯ ಕಾರ್ಯದರ್ಶಿ ಲೋಕೇಶ್‌, ಜಾವೀದ್‌, ಪರಮಶಿವಯ್ಯ, ಸಿದ್ದಯ್ಯ, ರಾಮಮೂರ್ತಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next