Advertisement

ಬ್ಯಾಂಕ್‌ ನೌಕರರ ಮುಷ್ಕರ: ವಹಿವಾಟು ಸ್ಥಗಿತ

05:20 PM May 31, 2018 | Team Udayavani |

ಹುಬ್ಬಳ್ಳಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಬುಧವಾರ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ ನೌಕರರು ಲ್ಯಾಮಿಂಗ್ಟನ್‌ ರಸ್ತೆ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕೇವಲ ಶೇ. 2 ವೇತನ ಹೆಚ್ಚಳ ಮಾಡುವ ಮೂಲಕ ಬ್ಯಾಂಕ್‌ ನೌಕರರ ಮೂಗಿಗೆ ತುಪ್ಪ ಹಚ್ಚುವ ಕೆಲಸವಾಗಿದೆ. ಈ ಕ್ರಮವನ್ನು ಬ್ಯಾಂಕ್‌ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ಕಟುವಾಗಿ ವಿರೋಧಿಸುತ್ತದೆ. ಪ್ರತಿ ವರ್ಷ ವೇತನ ಹೆಚ್ಚಿಸಬೇಕು ಎನ್ನುವ ಕಾರಣಕ್ಕಾಗಿಯೇ ವೇತನ ಹೆಚ್ಚಿಸಲಾಗಿದೆ ವಿನಃ ಬ್ಯಾಂಕ್‌ ನೌಕರರ ಹಿತ ಕಾಪಾಡುವ ಉದ್ದೇಶವಿಲ್ಲ. ಕೂಡಲೇ ನ್ಯಾಯಯುತ ವೇತನ ಪರಿಷ್ಕರಣೆ ಆಗಬೇಕು 7ನೇ ಶ್ರೇಣಿ ವರ್ಗದ ಅಧಿಕಾರಿಗಳಿಗೆ ವೇತನ ಪರಿಷ್ಕರಣೆ ಆಗಬೇಕು. ಇತರೆ ಸೇವಾ ಸೌಲಭ್ಯಗಳು ಸುಧಾರಣೆ ಆಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹುಬ್ಬಳ್ಳಿ ಘಟಕದ ಸಂಚಾಲಕ ಸಂತೋಷ ಕುಮಾರ ಮಾತನಾಡಿ, ಬ್ಯಾಂಕ್‌ಗಳ ಒಕ್ಕೂಟ ಬ್ಯಾಂಕ್‌ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ. ಶೇ.2 ವೇತನ ಹೆಚ್ಚಿಸುವ ಮೂಲಕ ನೌಕರರನ್ನು ವಂಚಿಸುವ ಕೆಲಸ ಒಕ್ಕೂಟದಿಂದ ನಡೆದಿದೆ. ಕೆಲ ಅಧಿಕಾರಿಗಳಿಗೆ ವೇತನ ಪರಿಷ್ಕರಣೆ ಸೌಲಭ್ಯ ದೊರೆತಿಲ್ಲ.
ನೌಕರರನ್ನು ಬೇಕಾಬಿಟ್ಟಿಯಾಗಿ ಕಾಣುತ್ತಿದ್ದು, ಕಾರ್ಮಿಕ ವಿರೋಧಿ ಕಾರ್ಯವಾಗಿದೆ. ಹಿಂದಿನಂತೆ ನ್ಯಾಯಯುತವಾದ ವೇತನ ಪರಿಷ್ಕರಣೆ ಆಗಬೇಕು. ಬ್ಯಾಂಕ್‌ ಒಕ್ಕೂಟಗಳ ಕಾರ್ಮಿಕರ ವಿರೋಧಿ ನೀತಿ ಖಂಡಿಸಿ ನಗರದಲ್ಲಿ ಗುರುವಾರ ಬೃಹತ್‌ ಮೆರವಣಿಗೆ ನಡೆಸಲಾಗುವುದು ಎಂದರು.

ಪ್ರಮುಖರಾದ ಸ್ಟೀಫ‌ನ್‌ ಜಯಚಂದ್ರ, ರಾಮ ಮೋಹನ, ಚೈತನ್ಯ ಕಂಚಿಬೈಲ್‌, ರುದ್ರಗೌಡ ಪಾಟೀಲ, ಸುಧಾಕರ ಪೈ, ರಾಮಕೃಷ್ಣ, ಬಾಲಚಂದ್ರ, ಮಾಲತೇಶ ಕುಲಕರ್ಣಿ, ರವೀಂದ್ರನಾಥ ಪೈ, ಎಂ. ಉದಯ ಇನ್ನಿತರರು ಪಾಲ್ಗೊಂಡಿದ್ದರು. 

ವಾಪಸಾಗುತ್ತಿದ್ದ ಗ್ರಾಹಕರು
ಬ್ಯಾಂಕ್‌ ನೌಕರರ ಮುಷ್ಕರ ಅರಿಯದ ಗ್ರಾಹಕರು ಬ್ಯಾಂಕ್‌ ಗಳಿಗೆ ಬಂದು ವಾಪಸಾಗುತ್ತಿರುವುದು ಕಂಡು ಬಂತು. ಬ್ಯಾಂಕ್‌ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ದರೂ, ಯಾವುದೇ ವ್ಯವಹಾರಗಳು ನಡೆಯಲಿಲ್ಲ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನಗದು ಕೊರತೆ ಕಂಡುಬಂದಿದೆ. ಕೆಲ ಎಟಿಎಂಗಳ ಮುಂದೆ ಜನರ ದೊಡ್ಡ ಸಾಲು ನಿರ್ಮಾಣವಾಗಿತ್ತು. ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಈ ಬ್ಯಾಂಕ್‌ಗಳ
ಎಟಿಎಂಗಳಲ್ಲಿ ಮಾತ್ರ ಹಣ ದೊರೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next