Advertisement

ಕೋವಿಡ್ ಲಸಿಕೆ ಕೊಟ್ಟದ್ದಕ್ಕೆ ಧನ್ಯವಾದ; ಬಾಂಗ್ಲಾ ಪಿಎಂ ಶೇಖ್‌ ಹಸೀನಾ ಪ್ರತಿಪಾದನೆ

12:49 AM Sep 05, 2022 | Team Udayavani |

ಢಾಕಾ: ರಷ್ಯಾ-ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾಗ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಭಾರತ ಸಹಾಯ ಮಾಡಿತು. ಇದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸಿನಾ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

“ಎಎನ್‌ಐ’ ಸುದ್ದಿಸಂಸ್ಥೆ ಜತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಕೊರೊನಾ ಸಮಯದಲ್ಲಿ ಭಾರತ ಸಹಾಯಹಸ್ತ ಚಾಚಿತು. ಉಚಿತವಾಗಿ ಕೋವಿಡ್‌ ಲಸಿಕೆ ಒದಗಿಸಿದ ಪ್ರಧಾನಿ ನರೇಂದ್ರ ಮೋದಿ ಒಳ್ಳೆಯತನಕ್ಕೆ ನಾವು ಆಭಾರಿಗಳು,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ನಾಲ್ಕು ದಿನಗಳ ಭೇಟಿಗಾಗಿ ಬಾಂಗ್ಲಾ ಪ್ರಧಾನಿ ಶೇಖ್‌ ಹಸಿನಾ ಅವರು ಸೋಮವಾರ ಭಾರತಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂದರ್ಶನ ಮಹತ್ವ ಪಡೆದಿದೆ.

ಭಾರತ ಮಧ್ಯೆಪ್ರವೇಶಿಸಲಿ:
“ರೋಹಿಂಗ್ಯಾ ವಲಸಿಗರ ಸಮಸ್ಯೆಯು ಬಾಂಗ್ಲಾದೇಶದ ಪಾಲಿಗೆ ದೊಡª ತಲೆನೋವಾಗಿ ಪರಿಣಮಿಸಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕು,’ ಎಂದು ಶೇಖ್‌ ಹಸಿನಾ ಮನವಿ ಮಾಡಿದರು.

“ಬಾಂಗ್ಲಾದೇಶದಲ್ಲಿ 1.1 ಮಿಲಿಯನ್‌ ರೋಹಿಂಗ್ಯಾ ವಲಸಿಗರಿದ್ದಾರೆ. ಅವರಿಗೆ ಮೂಲಸೌಕರ್ಯ ಒದಗಿಸುವುದೇ ಕಷ್ಟವಾಗಿದೆ. ಅವರು ವಾಪಸು ತಮ್ಮ ದೇಶಕ್ಕೆ ಮರಳುವ ನಿಟ್ಟಿನಲ್ಲಿ ಭಾರತ ಸೇರಿದಂತೆ ವಿಶ್ವ ಸಮುದಾಯ ಕ್ರಮ ಕೈಗೊಳ್ಳಬೇಕು,’ ಎಂದು ಒತ್ತಾಯಿಸಿದರು.

Advertisement

ಹಿಂದೂಗಳಿಗೆ ರಕ್ಷಣೆ:
“ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯ ಸುರಕ್ಷಿತವಾಗಿದೆ. ನಮ್ಮ ಸರ್ಕಾರ ಜಾತ್ಯತೀತತೆ ಯನ್ನು ಬೆಂಬಲಿಸುತ್ತದೆ. ಅಲ್ಪಸಂಖ್ಯಾತರ ಮೇಲೆ ದಾಳಿಯಾದರೆ, ಸಮಾಜದಲ್ಲಿ ಕೋಮು ಸೌರ್ಹದತೆಗೆ ಧಕ್ಕೆಯಾಗುವ ಪ್ರಕರಣಗಳು ಜರುಗಿದರೆ ಮುಲಾಜಿಲ್ಲದೇ ಕೂಡಲೇ ನಮ್ಮ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ,’ ಎಂದು ಹೇಳಿದರು.

ಹಸ್ತಕ್ಷೇಪ ಇಲ್ಲ:
ಭಾರತ ಮತ್ತು ಚೀನ ನಡುವಿನ ವಿವಾದದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಾಂಗ್ಲಾ ಪ್ರಧಾನಿ ಹೇಳಿದರು. “ನಮ್ಮ ವಿದೇಶಾಂಗ ನೀತಿ ತುಂಬ ಸ್ಪಷ್ಟವಾಗಿದೆ. ಎಲ್ಲರೊಂದಿಗೂ ಸ್ನೇಹ. ಯಾರೊಂದಿಗೂ ಹಗೆತನವಿಲ್ಲ. ನೆರೆಯ ದೇಶಗಳನ್ನು ಸ್ನೇಹದಿಂದ ಕಾಣುತ್ತೇವೆ,’ ಎಂದರು.

ಶ್ರೀಲಂಕಾ ಪರಿಸ್ಥಿತಿ ಎದುರಾಗುವುದಿಲ್ಲ
ಕೊರೊನಾ ಸಮಯ ಹಾಗೂ ಉಕ್ರೇನ್‌ ಯುದ್ಧದ ಸಂದರ್ಭದ ಹೊರತಾಗಿಯೂ ದೇಶದ ಆರ್ಥಿಕ ಸ್ಥಿತಿ ಉತ್ತಮ ವಾಗಿದೆ ಎಂದು ಬಾಂಗ್ಲಾ ಪ್ರಧಾನಿ ಹೇಳಿದ್ದಾರೆ. ಸಾಲ ಪಡೆಯುವ ವಿಷಯದಲ್ಲಿ ನಾವು ಕಠೊರವಾಗಿ ನಿರ್ಧಾರ ತಾಳಿದೆವು. ಶ್ರೀಲಂಕಾ ರೀತಿ ನಮ್ಮ ದೇಶ ಎಂದೂ ಆರ್ಥಿಕ ದುಸ್ಥಿತಿಯನ್ನು ಎದುರಿಸುವುದಿಲ್ಲ ಎಂದು ಶೇಖ್‌ ಹಸಿನಾ ಭರವಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next