ಢಾಕಾ/ನವದೆಹಲಿ: ಇಂಡೋ-ಬಾಂಗ್ಲಾ ಗಡಿ ಭಾಗದ ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಕೋವಿಡ್ 19 ಸೋಂಕು ಹರಡಿರುವ ಬಗ್ಗೆ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಜೆಯೊಬ್ಬ ತಾನೂ ಕೂಡಾ ಕೋವಿಡ್ 19 ರೋಗಿ ಎಂದು ಹೇಳಿ ನದಿಯಲ್ಲಿ ಈಜುತ್ತಾ ಚಿಕಿತ್ಸೆಗಾಗಿ ಅಸ್ಸಾಂಗೆ ಬಂದಿರುವ ಘಟನೆ ನಡೆದಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದ ಸುನಾಮ್ ಗಂಝ್ ಜಿಲ್ಲೆಯ ನಿವಾಸಿ 30 ವರ್ಷದ ಅಬ್ದುಲ್ ಹಖ್ ಎಂಬ ಯುವಕ ಭಾರತದ ಗಡಿ ಭದ್ರತಾ ಪಡೆಗೆ ಸಿಕ್ಕಿಬಿದ್ದಿದ್ದು, ನಂತರ ಆತನನ್ನು ಬಿಎಸ್ ಎಫ್ ಅಧಿಕಾರಿಗಳು ಬಾಂಗ್ಲಾದೇಶ್ ಬಾರ್ಡರ್ ಗಾರ್ಡ್ಸ್ ಗೆ (ಬಿಜಿಬಿ) ಹಸ್ತಾಂತರಿಸಿರುವುದಾಗಿ ವರದಿ ವಿವರಿಸಿದೆ.
ಭಾರತ ಮತ್ತು ಬಾಂಗ್ಲಾ ದೇಶದ ಗಡಿ ಪ್ರದೇಶದ ಕುಶಿಯಾರಾ ನದಿ ಮೂಲಕ ಬಾಂಗ್ಲಾದೇಶಿ ಯುವಕ ಹಖ್ ಈಜಾಡುತ್ತಾ ಭಾನುವಾರ ಬೆಳಗ್ಗೆ 7.30ಕ್ಕೆ ಭಾರತವನ್ನು ಪ್ರವೇಶಿಸಿದ್ದ. ಈ ವೇಳೆ ಭಾರತದ ಕಡೆಯ ಗ್ರಾಮದಲ್ಲಿರುವ ಜನರು ಈತನನ್ನು ಗಮನಿಸಿದ್ದರು. ನಂತರ ಆತನನ್ನು ಅಲ್ಲಿಯೇ ತಡೆಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಜೆಸಿ ನಾಯಕ್ ತಿಳಿಸಿದ್ದಾರೆ.
ಕರೀಂಗಂಜ್ ನಗರದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಮುಬಾರಕ್ ಪುರ್ ಬಳಿ ಈ ಘಟನೆ ನಡೆದಿತ್ತು. ಎರಡು ದೇಶಗಳ ನಡುವಿನ ಗಡಿಯಲ್ಲಿ ತಂತಿ ಬೇಲಿ ಇಲ್ಲದ ಭಾಗ ಇದ್ದಿರುವುದಾಗಿ ವರದಿ ವಿವರಿಸಿದೆ. ಈ ಯುವಕನಿಗೆ ಜ್ವರ ಇದ್ದಿದ್ದು, ಆತನನ್ನು ನೋಡಿದಾಗಲೂ ಆರೋಗ್ಯದಿಂದ ಇದ್ದಂತೆ ಕಂಡಿಲ್ಲ. ಈತ ತನಗೆ ಕೋವಿಡ್ 19 ವೈರಸ್ ತಗುಲಿದ್ದು, ಚಿಕಿತ್ಸೆ ದೊರೆಯುತ್ತದೆಯಾ ಎಂದು ನೋಡಲು ಭಾರತಕ್ಕೆ ಬಂದಿರುವುದಾಗಿ ತಿಳಿಸಿರುವುದಾಗಿ ನಾಯಕ್ ವಿವರಿಸಿದ್ದಾರೆ.
ಬಾಂಗ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಅವರು ಎರಡು ಬೋಟ್ ಗಳಲ್ಲಿ ಭಾರತದ ಪ್ರದೇಶಕ್ಕೆ ಬಂದು ಬೆಳಗ್ಗೆ 9ಗಂಟೆಗೆ ಯುವಕನನ್ನು ಕರೆದೊಯ್ದಿರುವುದಾಗಿ ತಿಳಿಸಿದ್ದಾರೆ.