ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂ ಸಮುದಾಯದ ಹಕ್ಕಿನ ಕುರಿತು ಧ್ವನಿ ಎತ್ತಿದ್ದಕ್ಕೆ ದೇಶದ್ರೋಹ ಆರೋಪದಡಿ ಬಂಧಿಸಲ್ಪಟ್ಟಿದ್ದ ಇಸ್ಕಾನ್ ನ ಸನ್ಯಾಸಿ ಚಿನ್ಮಯ್ ಕೃಷ್ಣದಾಸ್ ಬ್ರಹ್ಮಚಾರಿಗೆ ಬಾಂಗ್ಲಾ ಕೋರ್ಟ್ ಮಂಗಳವಾರ (ನ.26) ಜಾಮೀನು ನಿರಾಕರಿಸಿದ್ದು, ದೇಶದ್ರೋಹ ಪ್ರಕರಣವನ್ನು ಎತ್ತಿಹಿಡಿದಿದೆ.
ಬಾಂಗ್ಲಾದಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ನಡೆಸುತ್ತಿದ್ದ ದಾಳಿಯನ್ನು ಖಂಡಿಸಿ ಚಿನ್ಮಯ್ ದಾಸ್ ಪ್ರಭು ಹಲವಾರು ಪ್ರತಿಭಟನೆ ನಡೆಸಿದ್ದರು. ಏತನ್ಮಧ್ಯೆ ಢಾಕಾ ಪೊಲೀಸ್ ಡಿಟೆಕ್ಟಿವ್ (ಪತ್ತೇದಾರಿ) ಬ್ರ್ಯಾಂಚ್ ನವೆಂಬರ್ 25ರಂದು ಢಾಕಾ ವಿಮಾನದ ನಿಲ್ದಾಣದಲ್ಲಿ ದೇಶದ್ರೋಹ ಆರೋಪಡಿ ಚಿನ್ಮಯ್ ದಾಸ್ ಅವರನ್ನು ಬಂಧಿಸಿತ್ತು.
ಶಾಂತಿಗೆ ಭಂಗ ತರುವ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ. ನಿಮ್ಮ ಭಾವನೆಗಳನ್ನು (ಆಕ್ರೋಶ) ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಶಾಂತಿ ಮಂತ್ರ ಮಾತ್ರವೇ ನಮಗಿರುವ ಏಕೈಕ ಮಾರ್ಗವಾಗಿದೆ ಎಂದು ನ್ಯಾಯಾಂಗ ಬಂಧನಕ್ಕೊಳಪಟ್ಟ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ಈ ಪ್ರತಿಕ್ರಿಯೆ ನೀಡಿದ್ದಾರೆ.
ಚಿನ್ಮಯ್ ದಾಸ್ ಪ್ರಭು ದೇಶಬಿಟ್ಟು ತೆರಳದಂತೆ ನಿರ್ಬಂಧಿಸಿ, ಅಧಿಕಾರಿಗಳು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ವರದಿ ವಿವರಿಸಿದೆ.
ಚಿನ್ಮಯ್ ದಾಸ್ ಪ್ರಭು ಅವರನ್ನು ಭಯೋ*ತ್ಪಾದಕರು ಎಂಬಂತೆ ಬಿಂಬಿಸಲಾಗುತ್ತಿದ್ದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜ*ನ್ಯ ಖಂಡಿಸಿ ಪ್ರಭು ಹಲವಾರು ಪ್ರತಿಭಟನೆ ನಡೆಸಿದ್ದರು. ಆದರೆ ಇದನ್ನು ಶಾಂತಿಯುತವಾಗಿ ಆಯೋಜಿಸಲಾಗಿತ್ತು ಎಂದು ಇಸ್ಕಾನ್ ನ ರಾಧಾರಮಣ ದಾಸ್ ಸಿಎನ್ ಎನ್ ನ್ಯೂಸ್ 18ಗೆ ತಿಳಿಸಿದ್ದಾರೆ.
ಚಿನ್ಮಯಿ ಪ್ರಭು ಅವರ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಿರುವುದು ಆಧಾರರಹಿತವಾದದ್ದು, ವಿಮಾನ ನಿಲ್ದಾಣದಲ್ಲಿ ಯಾವುದೇ ಕಾರಣ ನೀಡದೇ ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಭಾರತದ ಮಧ್ಯಪ್ರವೇಶಕ್ಕೆ ಇಸ್ಕಾನ್ ಮನವಿ:
ಬಾಂಗ್ಲಾದಲ್ಲಿ ಚಿನ್ಮಯಿ ಕೃಷ್ಣ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ಇಸ್ಕಾನ್ ಮನವಿ ಮಾಡಿಕೊಂಡಿದೆ. ಇಸ್ಕಾನ್ ಸಂಸ್ಥೆ ಜಗತ್ತಿನ ಯಾವುದೇ ಭಾಗದಲ್ಲೂ ಭಯೋ*ತ್ಪಾದನೆ ಸೇರಿದಂತೆ ಯಾವುದೇ ಕ್ರಿಮಿನಲ್ ಚಟುವಟಿಕೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಬಾಂಗ್ಲಾ ದೇಶಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದೆ.
ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಬಂಧನ ಖಂಡಿಸಿ ಬಾಂಗ್ಲಾದಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.