ಢಾಕಾ: ಪ್ರವಾಸಿ ವೆಸ್ಟ್ ಇಂಡೀಸ್ ಮೇಲೆ ಸವಾರಿ ಮಾಡಿದ ಬಾಂಗ್ಲಾದೇಶ ತನ್ನ ಟೆಸ್ಟ್ ಇತಿಹಾಸದ ಐತಿಹಾಸಿಕ ಗೆಲುವನ್ನು ದಾಖಲಿಸಿದೆ. ಢಾಕಾದಲ್ಲಿ ಮೂರೇ ದಿನದಲ್ಲಿ ಮುಗಿದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಬಾಂಗ್ಲಾ ಇನ್ನಿಂಗ್ಸ್ ಹಾಗೂ 184 ರನ್ನುಗಳ ಭಾರೀ ಅಂತರದಿಂದ ಗೆದ್ದಿತು. ಇದು ಬಾಂಗ್ಲಾ ಆಚರಿಸಿದ ಇನ್ನಿಂಗ್ಸ್ ಗೆಲುವಿನ ಮೊದಲ ಸಂಭ್ರಮ.
ಅಷ್ಟೇ ಅಲ್ಲ, ಈ ಪಂದ್ಯದಲ್ಲಿ ವೆಸ್ಟ್ ಇಂಡೀಸಿಗೆ ಫಾಲೋಆನ್ ಹೇರುವ ಮೂಲಕವೂ ಬಾಂಗ್ಲಾ ಸುದ್ದಿಯಾಯಿತು. ತನ್ನ ಟೆಸ್ಟ್ ಚರಿತ್ರೆಯಲ್ಲಿ ಬಾಂಗ್ಲಾ ಎದುರಾಳಿ ತಂಡಕ್ಕೆ ಫಾಲೋಆನ್ ವಿಧಿಸಿದ್ದು ಇದೇ ಮೊದಲು.
ಬಾಂಗ್ಲಾದೇಶದ 508 ರನ್ನುಗಳ ಬೃಹತ್ ಮೊತ್ತಕ್ಕೆ ಜವಾಬು ನೀಡುತ್ತಿದ್ದ ವೆಸ್ಟ್ ಇಂಡೀಸ್ 2ನೇ ದಿನದಾಟದ ಅಂತ್ಯಕ್ಕೆ 75 ರನ್ನಿಗೆ 5 ವಿಕೆಟ್ ಉದುರಿಸಿಕೊಂಡು ಚಿಂತಾಜನಕ ಸ್ಥಿತಿಯಲ್ಲಿತ್ತು. 3ನೇ ದಿನವಾದ ರವಿವಾರ ಕುಸಿತ ಮುಂದುವರಿದು ಕೆರಿಬಿಯನ್ನರ ಇನ್ನಿಂಗ್ಸ್ 111 ರನ್ನಿಗೆ ಕೊನೆಗೊಂಡಿತು. 397 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿ ಫಾಲೋಆನ್‌ಗೆ ತುತ್ತಾದ ವಿಂಡೀಸ್ ದ್ವಿತೀಯ ಸರದಿಯಲ್ಲೂ ಚೇತರಿಕೆ ಕಾಣಲಿಲ್ಲ. ಚಹಾ ವಿರಾಮದ ಒಳಗಾಗಿ 213 ರನ್ನಿಗೆ ಆಲೌಟಾಗಿ ಶರಣಾಗತಿ ಸಾರಿತು. ಅರ್ಥಾತ್, ರವಿವಾರದ ಎರಡೇ ಅವಧಿಗಳ ಆಟದಲ್ಲಿ ವಿಂಡೀಸ್ 15 ವಿಕೆಟ್ ಉದುರಿಸಿಕೊಂಡಿತು! ಇದರೊಂದಿಗೆ 2 ಪಂದ್ಯಗಳ ಕಿರು ಸರಣಿಯನ್ನು ಬಾಂಗ್ಲಾ ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಂಡಿತು.
ಮಿರಾಜ್ 12 ವಿಕೆಟ್ ಬೇಟೆ
ವೆಸ್ಟ್ ಇಂಡೀಸ್ ಪತನದಲ್ಲಿ ಆಫ್ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 58 ರನ್ನಿಗೆ 7 ವಿಕೆಟ್ ಕಿತ್ತು ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಮಿರಾಜ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ ಘಾತಕ ದಾಳಿ ನಡೆಸಿ 59 ರನ್ನಿಗೆ 5 ವಿಕೆಟ್ ಉಡಾಯಿಸಿದರು. ಈ 12 ವಿಕೆಟ್ ಸಾಧನೆಗಾಗಿ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸರಣಿಶ್ರೇಷ್ಠ ಪ್ರಶಸ್ತಿ ಬಾಂಗ್ಲಾ ನಾಯಕ ಶಕಿಬ್ ಅಲ್ ಹಸನ್ ಅವರಿಗೆ ಒಲಿಯಿತು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-508. ವೆಸ್ಟ್ ಇಂಡೀಸ್-111 (ಹೆಟ್‌ಮೈರ್ 37, ಡೌರಿಚ್ 37, ಮಿರಾಜ್ 58ಕ್ಕೆ 7, ಶಕಿಬ್ 27ಕ್ಕೆ 3) ಮತ್ತು 213 (ಹೆಟ್‌ಮೈರ್ 93, ರೋಚ್ ಔಟಾಗದೆ 37, ಹೋಪ್ 25, ಮಿರಾಜ್ 59ಕ್ಕೆ 5, ತೈಜುಲ್ 40ಕ್ಕೆ 3). ಪಂದ್ಯಶ್ರೇಷ್ಠ: ಮೆಹಿದಿ ಹಸನ್ ಮಿರಾಜ್. ಸರಣಿಶ್ರೇಷ್ಠ: ಶಕಿಬ್ ಅಲ್ ಹಸನ್.