ರಾವಲ್ಪಿಂಡಿ: ಪಾಕಿಸ್ತಾನದ ಪ್ರವಾಸದಲ್ಲಿರುವ ಬಾಂಗ್ಲಾದೇಶ ತಂಡವು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಮೂಲಕ ಪಾಕಿಸ್ತಾನವು ತವರಿನಲ್ಲೇ ಮುಖಭಂಗ ಅನುಭವಿಸಿದೆ.
ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವು ಹತ್ತು ವಿಕೆಟ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದು ಬಾಂಗ್ಲಾದೇಶದ ಪಾಕಿಸ್ತಾನ ವಿರುದ್ದದ ಮೊದಲ ಟೆಸ್ಟ್ ಗೆಲುವಾಗಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಗೆ 23 ರನ್ ಗಳಿಸಿದ್ದಲ್ಲಿಂದ ಇಂದಿನ ದಿನದಾಟ ಆರಂಭಿಸಿದ ಪಾಕಿಸ್ಥಾನವು ಸತತ ವಿಕೆಟ್ ಕಳೆದುಕೊಂಡಿತು. ಶಕೀಬ್ ಮತ್ತು ಮೆಹದಿ ಹಸನ್ ದಾಳಿಗೆ ಸಿಲುಕಿದ ಪಾಕಿಸ್ತಾನ ಕೇವಲ 146 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಪಾಕಿಸ್ತಾನದ ಪರ ರಿಜ್ವನಾ 51 ರನ್, ಶಫೀಖ್ 37 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಮೆಹದಿ ಹಸನ್ ಮಿರಾಜ್ ನಾಲ್ಕು ವಿಕೆಟ್ ಕಿತ್ತರೆ, ಶಕೀಬ್ ಮೂರು ವಿಕೆಟ್ ಪಡೆದರು.
ಗೆಲುವಿಗೆ ಕೇವಲ 30 ರನ್ ಗುರಿ ಪಡೆದ ಬಾಂಗ್ಲಾದೇಶ ತಂಡವು 6.3 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
ಮೊದಲ ಇನ್ನಿಂಗ್ಸ್ ನಲ್ಲಿ 191 ರನ್ ಗಳ ಬೃಹತ್ ಆಟವಾಡಿದ್ದ ಮುಶ್ಫೀಕರ್ ರಹೀಂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ಥಾನ: 448-6 ಮತ್ತು 146
ಬಾಂಗ್ಲಾದೇಶ: 565 ಮತ್ತು 30-0