ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ದಾಳಿಗಳು ಮುಂದುವರಿದಿದ್ದು, ದೇಶಾದ್ಯಂತ ಸಾವಿರಾರು ಹಿಂದೂಗಳು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿ, ರಕ್ಷಣೆ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಹಲವು ಕಡೆಗಳಲ್ಲಿ ಹಿಂದೂಗಳು ಒಗ್ಗಟ್ಟಾಗಿ ಪಂಜಿನ ಮೆರವಣಿಗೆ ನಡೆಸಿ ದಾಳಿಗಳ ವಿರುದ್ಧ ಆಕ್ರೋಶ ಹೊರ ಹಾಕಿವೆ. ಘಟನೆ ಗಳ ಬಳಿಕ ಒಂದು ರೀತಿಯ ಉದ್ವಿಗ್ನತೆ ನಿರ್ಮಾಣವಾಗಿದೆ.
ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಜನರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ಹೇಳಿದ್ದಾರೆ. ಬಾಂಗ್ಲಾದೇಶದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ದಾಳಿಯ ಬಗ್ಗೆ ತನಿಖೆ ನಡೆಸಲು ಮತ್ತು ಅವುಗಳನ್ನು ತಡೆಯುವಲ್ಲಿ ನಿರ್ಲಕ್ಷ್ಯವಿದೆಯೇ ಎಂದು ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. “ಜಾತ್ಯತೀತ ರಾಷ್ಟ್ರ”ದಲ್ಲಿ ಹಿಂಸಾಚಾರವನ್ನು ಯಾವುದೇ ಸಂದರ್ಭದಲ್ಲೂ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.
ಎಎನ್‌ಐ ಪ್ರಕಾರ, ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗಿದೆ ಎಂಬ ವರದಿಗಳು ಇಸ್ಲಾಂ ಧರ್ಮವನ್ನು ನಿಂದಿಸುವ ಆಪಾದಿತ ಫೇಸ್‌ಬುಕ್ ಪೋಸ್ಟ್‌ಗಳ ವದಂತಿಗಳ ಮಧ್ಯೆ ಬೆಳಕಿಗೆ ಬಂದ ನಂತರ ಮಾನವ ಹಕ್ಕುಗಳ ಸಂಸ್ಥೆ ಈ ಹೇಳಿಕೆಗಳನ್ನು ನೀಡಿದೆ.
ನರೈಲ್ ನ ಲೋಹಗರದ ಸಹಪಾರ ಪ್ರದೇಶದಲ್ಲಿ ಜುಲೈ 15ರಂದು ಹಿಂದೂ ಅಲ್ಪಸಂಖ್ಯಾತರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. 18 ವರ್ಷದ ಯುವಕ ಫೇಸ್‌ಬುಕ್‌ನಲ್ಲಿ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಎಂದು ಶುಕ್ರವಾರದ ಪ್ರಾರ್ಥನೆಯ ನಂತರ ಗುಂಪುಗಳು ಹಲವು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದ್ದವು.
ಆಕಾಶ್ ವಿರುದ್ಧ ಡಿಜಿಟಲ್ ಸೆಕ್ಯುರಿಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿರುವ ಪೊಲೀಸರು “ಪರಿಸ್ಥಿತಿಯನ್ನು ಹತೋಟಿಗೆ ತರಲು” ಆಕಾಶ್ ತಂದೆ ಅಶೋಕ್ ಸಹಾರನ್ನು ಬಂಧಿಸಿದ್ದಾರೆ.
ದಾಳಿಕೋರರ ಪೈಕಿ ಯಾರನ್ನೂ ಇದುವರೆಗೆ ಬಂಧಿಸಲಾಗಿಲ್ಲ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.