Advertisement

Bangladesh vs Sri Lanka: 1ನೇ ಏಕದಿನ; ನಜ್ಮುಲ್‌ ಶತಕ, ಲಂಕಾ ವಿರುದ್ಧ ಬಾಂಗ್ಲಾಕ್ಕೆ  ಜಯ

09:28 PM Mar 14, 2024 | Team Udayavani |

ಚತ್ತೋಗ್ರಾಮ್‌ (ಬಾಂಗ್ಲಾದೇಶ): ಪ್ರವಾಸಿ ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ, ಬಾಂಗ್ಲಾದೇಶ 6 ವಿಕೆಟ್‌ಗಳ ಜಯ ಸಾಧಿಸಿದೆ.

Advertisement

ನಾಯಕ ನಜ್ಮುಲ್‌ ಹುಸೇನ್‌ ಅವರ ಅಜೇಯ ಶತಕ ಬಾಂಗ್ಲಾ ಚೇಸಿಂಗ್‌ನ ಆಕರ್ಷಣೆ ಆಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 48.5 ಓವರ್‌ಗಳಲ್ಲಿ 255ಕ್ಕೆ ಆಲೌಟ್‌ ಆದರೆ, ಬಾಂಗ್ಲಾದೇಶ ಆರಂಭಿಕ ಕುಸಿತದಿಂದ ಚೇತರಿಸಿಕೊಂಡೂ 44.4 ಓವರ್‌ಗಳಲ್ಲಿ 4 ವಿಕೆಟಿಗೆ 257 ರನ್‌ ಬಾರಿಸಿ ಗೆಲುವು ಸಾಧಿಸಿತು. ಆಗ ನಜ್ಮುಲ್‌ ಹುಸೇನ್‌ 122 ಮತ್ತು ಮುಶ್ಫೀಕರ್‌ ರಹೀಂ 73 ರನ್‌ ಮಾಡಿ ಅಜೇಯರಾಗಿದ್ದರು.

ನಜ್ಮುಲ್‌-ರಹೀಂ ಮುರಿಯದ 5ನೇ ವಿಕೆಟಿಗೆ 165 ರನ್‌ ಪೇರಿಸಿ ತಂಡವನ್ನು ಯಶಸ್ವಿಯಾಗಿ ದಡ ಸೇರಿಸಿದರು. ಬಾಂಗ್ಲಾದ 4 ವಿಕೆಟ್‌ 92 ರನ್ನಿಗೆ ಬಿದ್ದಿತ್ತು. ಮೊದಲ ಎಸೆತದಲ್ಲೇ ಲಿಟನ್‌ ದಾಸ್‌ (0) ವಿಕೆಟ್‌ ಬಿದ್ದೊಡನೆ ಕ್ರೀಸಿಗೆ ಆಗಮಿಸಿದ ನಜ್ಮುಲ್‌ ಹುಸೇನ್‌ ಕಪ್ತಾನನ ಆಟಕ್ಕೆ ಉತ್ತಮ ನಿದರ್ಶನ ಒದಗಿಸಿದರು. ಅವರ 122 ರನ್‌ 129 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 13 ಫೋರ್‌ ಮತ್ತು 2 ಸಿಕ್ಸರ್‌. ಇದು ಅವರ 3ನೇ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ.

ರಹೀಂ 84 ಎಸೆತಗಳಿಂದ 73 ರನ್‌ ಮಾಡಿದರು (8 ಬೌಂಡರಿ). ಈ ನಡುವೆ ಮಹಮದುಲ್ಲ 37 ರನ್‌ ಕೊಡುಗೆ ಸಲ್ಲಿಸಿದರು. ಶ್ರೀಲಂಕಾ ಸರದಿಯಲ್ಲಿ ಜನಿತ್‌ ಲಿಯನಗೆ ಸರ್ವಾಧಿಕ 67, ಕುಸಲ್‌ ಮೆಂಡಿಸ್‌ 59 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-48.5 ಓವರ್‌ಗಳಲ್ಲಿ 255 (ಜನಿತ್‌ ಲಿಯನಗೆ 67, ಕುಸಲ್‌ ಮೆಂಡಿಸ್‌ 59, ನಿಸ್ಸಂಕ 36, ತಾಂಜಿಮ್‌ ಹಸನ್‌ 44ಕ್ಕೆ 3, ಟಸ್ಕಿನ್‌ ಅಹ್ಮದ್‌ 60ಕ್ಕೆ 3, ಶೊರೀಫ‌ುಲ್‌ ಇಸ್ಲಾಮ್‌ 51ಕ್ಕೆ 3). ಬಾಂಗ್ಲಾದೇಶ-44.4 ಓವರ್‌ಗಳಲ್ಲಿ 4 ವಿಕೆಟಿಗೆ 257 (ನಜ್ಮುಲ್‌ ಔಟಾಗದೆ 122, ರಹೀಂ ಔಟಾಗದೆ 73, ಮಹಮದುಲ್ಲ 37, ಮಧುಶಂಕ 44ಕ್ಕೆ 2). ಪಂದ್ಯಶ್ರೇಷ್ಠ: ನಜ್ಮುಲ್‌ ಹುಸೇನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next