ಢಾಕಾ :ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ದುಷ್ಕರ್ಮಿಗಳು ಶನಿವಾರ ಮುನ್ಶಿಗಂಜ್‌ನ ಸಿರಜ್‌ದಿಖಾನ್ ಉಪಜಿಲ್ಲೆಯ ರಶೂನಿಯಾ ಯೂನಿಯನ್‌ನಲ್ಲಿರುವ ದಾನಿಯಪರ ಮಹಾ ಕಾಳಿ ಮಂದಿರದಲ್ಲಿ ಆರು ವಿಗ್ರಹಗಳನ್ನು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ.
ಈ ವಿಧ್ವಂಸಕ ಕೃತ್ಯವನ್ನು ಮುಂಜಾನೆ 3 ರಿಂದ 4 ಗಂಟೆಯೊಳಗೆ ನಡೆಸಲಾಗಿದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕ ಎಂ ಡಿ ರಶೇದುಲ್ ಇಸ್ಲಾಂ ಖಚಿತಪಡಿಸಿದ್ದಾರೆ.
ದೇವಸ್ಥಾನಕ್ಕೆ ಯಾವುದೇ ಭದ್ರತೆ ಇರಲಿಲ್ಲ ಮತ್ತು ವಿಗ್ರಹಗಳನ್ನು ಮಾತ್ರ ಧ್ವಂಸ ಮಾಡಲಾಗಿದೆ. ಮುಖ್ಯ ದ್ವಾರದ ಬೀಗ ಮುರಿದಿದ್ದು, ಸಣ್ಣ ಶೆಡ್ ಗೆ ಹಾನಿ ಮಾಡಲಾಗಿದೆ ಮತ್ತು ದೇವಸ್ಥಾನದಲ್ಲಿರುವ ಎಲ್ಲಾ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ ಎಂದು ದಾನಿಯಪರ ಮಹಾ ಸ್ಮಶಾನ ಕಾಳಿ ಮಂದಿರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶುವ್ರತ ದೇವ್ ನಾಥ್ ತಿಳಿಸಿದ್ದಾರೆ. ಪೊಲೀಸ್ ದೂರು ನೀಡಲು ಯೋಚಿಸಿದ್ದೇವೆ. ಹಿಂದೆಂದೂ ಈ ದೇವಾಲಯದಲ್ಲಿ ಇಂತಹ ಘಟನೆಗಳು ನಡೆದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:- ನುಸ್ರತ್ ಜಹಾನ್ ಗೆ ಮದುವೆ ಆಗಿದೆಯೇ? ಪ್ರಶ್ನೆ ಹುಟ್ಟು ಹಾಕಿದ ಫೋಟೋ
ಬಾಂಗ್ಲಾದೇಶದ ಹಲವು ಸ್ಥಳಗಳಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪವಿತ್ರ ಕುರಾನ್ ಗ್ರಂಥವನ್ನು ಅಪವಿತ್ರಗೊಳಿಸಲಾಗಿದೆಯೆಂದು ಸುದ್ದಿಯಾದ ನಂತರ ನನುವಾರ್ ದಿಗಿ ಎಂಬ ನದಿ ದಡದಲ್ಲಿದ್ದ ದುರ್ಗಾ ಪೂಜಾ ಸ್ಥಳವನ್ನು ಮತ್ತು ಚಾಂದಪುರ, ಚಿತ್ತಗಾಂಗ್, ಗಾಜಿಪುರ, ಬಂದರ್ಬನ್, ಚಪೈನವಾಬ್ಗಂಜ್ ಮತ್ತು ಮೌಲ್ವಿಬಜಾರ್ ಪ್ರದೇಶದಲ್ಲಿ ಹಲವಾರು ಪೂಜಾ ಸ್ಥಳಗಳನ್ನು ಧ್ವಂಸಗೊಳಿಸಲಾಗಿದೆ. ಈ ಘರ್ಷಣೆಗಳು ಹಲವಾರು ಸಾವು ನೋವುಗಳಿಗೆ ಕಾರಣವಾಗಿದೆ.
ಶುಕ್ರವಾರ, ಬಾಂಗ್ಲಾದೇಶದ ನೊಖಾಲಿ ಜಿಲ್ಲೆಯ ಬೇಗಮ್‌ಗಂಜ್ ಉಪಜಿಲ್ಲೆ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಜತನ್ ಕುಮಾರ್ ಸಾಹಾ ಎಂಬ ವ್ಯಕ್ತಿ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ಒಂದು ಗುಂಪು ಶುಕ್ರವಾರ ಬಾಂಗ್ಲಾದೇಶದ ನೊಖಾಲಿ ಜಿಲ್ಲೆಯ ಇಸ್ಕಾನ್ ದೇವಾಲಯದ ಮೇಲೆ ದಾಳಿ ಮಾಡಿತ್ತು ಮತ್ತು ಅಲ್ಲಿಯೂ ಒಬ್ಬರನ್ನು ಕೊಲ್ಲಲಾಗಿದೆ ಎಂದು ಇಸ್ಕಾನ್ ದೇವಾಲಯದ ಸದಸ್ಯರೊಬ್ಬರು ತಿಳಿಸಿದ್ದಾರೆ.