Advertisement
ಪಶ್ಚಿಮ ಬಂಗಾಳದ ಜಲ್‌ಪೈಗುರಿಯ ಮಾಣಿಕ್‌ಗಂಜ್ ಗಡಿಯಲ್ಲಿ ಗುರುವಾರ 500ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳು ನೆರೆದಿದ್ದರು. ವರದಿಗಳ ಪ್ರಕಾರ, ಜನರನ್ನು ನಿಯಂತ್ರಿಸಲು ಬಿಎಸ್ಎಫ್ ಸಿಬ್ಬಂದಿ ಕೂಡ ಗುಂಡು ಹಾರಿಸಿದರು ಎನ್ನಲಾಗಿದೆ. ಭಾರತದ ಗಡಿಗೆ ನುಸುಳುವವರ ಪೈಕಿ ಹಿಂದೂಗಳು ಹಾಗೂ ಶೇಖ್ ಹಸೀನಾ ಪಕ್ಷವಾದ ಆವಾಮಿ ಲೀಗ್‌ನ ಸದಸ್ಯರು ಬೇಲಿ ಹಾಕದೇ ಇರುವ ಪ್ರದೇಶದ ಗಡಿಯಲ್ಲಿ ಒಳ ನುಸುಳುತ್ತಿದ್ದು, ಹೀಗೆ ಗಡಿ ಉದ್ದಕ್ಕೂ ಹಲವೆಡೆ ಒಳ ನುಸುಳುವಿಕೆ ಪ್ರಯತ್ನಗಳು ನಡೆಯುತ್ತಿವೆ. ಮತ್ತೊಂದು ಗಡಿ ಪ್ರದೇಶದಲ್ಲಿ 6 ಮಂದಿ ಗಡಿ ಪ್ರವೇಶಿಸಲು ಯತ್ನಿಸಿದಾಗ ಬಿಎಸ್‌ಎಫ್ ಸಿಬ್ಬಂದಿ ತಡೆದಿದ್ದಾರೆ.
ಬಿಎಸ್ಎಫ್ ಡಿಐಜಿ (ಉತ್ತರ ಬಂಗಾಳ ಗಡಿ ಪ್ರದೇಶ) ಅಮಿತ್ ಕುಮಾರ್ ತ್ಯಾಗಿ ಮಾತನಾಡಿ “ಬಾಂಗ್ಲಾದ ಗಡಿ ಜಿಲ್ಲೆಯಾದ ಠಾಕೂರ್‌ಗಾಂವ್‌ನ ಕಿಶನ್‌ಗಂಜ್‌ನ ಉತ್ತರ ದಿನಜ್‌ಪುರ್ ಗಡಿ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಮಂದಿ ಆವಾಮಿ ಲೀಗ್ ಪಕ್ಷದ ಸದಸ್ಯರು ಹಾಗೂ ಹಿಂದೂಗಳು ಸೇರಿದ ಜನರ ಗುಂಪು ಸೇರಿತ್ತು. ಆ ಗುಂಪನ್ನು ಗಾಳಿಯಲ್ಲಿ ಗುಂಡು ಹಾರಿಸಿ ಚದುರಿಸಲಾಯಿತು. ಆ ಗ್ರಾಮಸ್ಥರೆಲ್ಲ ಈಗಲೂ 200ಮೀ. 500ಮೀ. ಅಂತರದಲ್ಲಿದ್ದಾರೆ. ಹಿರಿಯ ಬಿಎಸ್‌ಎಫ್ ಅಧಿಕಾರಿಗಳು ಹಾಗೂ ಬಿಜಿಬಿ (ಬಾಂಗ್ಲಾದೇಶ ಗಡಿ ದಳ) ತಂಡದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ” ಎಂದು ತ್ಯಾಗಿ ಹೇಳಿದರು.