ಬೆಂಗಳೂರು: ವಿಜ್ಞಾನ ಬರಹಗಾರ ಮತ್ತು ಬ್ಲಾಗರ್ ಅನಂತ್ ವಿಜಯ ದಾಸ್ ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಬಾಂಗ್ಲಾ ದೇಶದ ಉಗ್ರ ಸಂಘಟನೆ ಅಸರ್ ಬಾಂಗ್ಲಾದ ಸದಸ್ಯ ಫೈಜಲ್ ಅಹಮದ್ ನನ್ನು ಕೊಲ್ಕತ್ತಾ ಪೊಲೀ ಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
2015ರ ಮೇ 12 ರಂದು ಬಾಂಗ್ಲಾದ ಸಿಲೆಟ್ ಎಂಬಲ್ಲಿ ನಡೆದ ದಾಸ್ ಹತ್ಯೆಯಲ್ಲಿ ಫೈಜಲ್ ಸೇರಿ ನಾಲ್ವರು ಭಾಗಿಯಾಗಿದ್ದರು. ಅವರಿಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ಫೈಜಲ್ ತಲೆಮರೆಸಿ ಕೊಂಡಿದ್ದ. ಆತ ಭಾರತ ದಲ್ಲಿ ಇರುವ ಬಗ್ಗೆ ಜೂನ್ ತಿಂಗಳಲ್ಲಿ ಬಾಂಗ್ಲಾ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಕೋಲ್ಕತ್ತಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
ತನಿಖೆ ವೇಳೆ ಫೈಜಲ್ ಬೆಂಗಳೂರಿನಲ್ಲಿ ಇರುವುದು ಪತ್ತೆಯಾಗಿತ್ತು. ಕೋಲ್ಕತಾ ಪೊಲೀಸರ ವಿಶೇಷ ತಂಡ ಬೆಂಗಳೂರಿಗೆ ಬಂದು ಫೈಜಲ್‌ನನ್ನು ಬೊಮ್ಮನಹಳ್ಳಿಯಿಂದ ಜು. 1ರಂದು ಸೆರೆಹಿಡಿದು ಕರೆದೊಯ್ದಿದೆ.
ಅಲ್ ಕಾಯಿದಾ ಜತೆ ಸಂಪರ್ಕ :
ಫೈಜಲ್ ಉಗ್ರ ಸಂಘಟನೆ ಅಲ್ ಕಾಯಿದಾ ಜತೆಗೂ ಸಂಪರ್ಕ ಹೊಂದಿದ್ದು, ಅದಕ್ಕಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಸದ್ಯ ಜೀವನ ನಿರ್ವಹಣೆಗಾಗಿ ಬೆಂಗಳೂರು ವಿಳಾಸದಲ್ಲಿ ವಾಹನ ಚಾಲನ ಪರವಾನಿಗೆ ಮಾಡಿಸಿಕೊಂಡು ಕ್ಯಾಬ್ ಚಾಲಕನಾಗಿದ್ದ. ಅಕ್ರಮವಾಗಿ ಭಾರತ ಪ್ರವೇಶಿಸಿ ನಕಲಿ ದಾಖಲೆ ಸೃಷ್ಟಿಸಿದ್ದ. ಮಿಜೋರಾಂ ವಿಳಾಸ ಬಳಸಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಅಸ್ಸಾಂನ ವಿಳಾಸದಲ್ಲಿ ವೋಟರ್ ಐಡಿ ಮಾಡಿಸಿಕೊಂಡಿದ್ದ. ಈ ಹಿಂದೆ ಕೊಲ್ಕತ್ತಾದಲ್ಲಿ ಮದರಸಗಳಿಗೆ ತೆರಳಿ ಜಿಹಾದಿ ಬಗ್ಗೆ ಪ್ರವಚನ ನೀಡಿದ್ದ ಎಂದು ಹೇಳಲಾಗಿದೆ.