ಢಾಕಾ: ಪ್ರವಾಸಿ ಭಾರತದ ವಿರುದ್ಧ ಆಡಲಾಗುವ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಎಡಗೈ ವೇಗದ ಬೌಲರ್ ನಾಸುಮ್ ಅಹ್ಮದ್ ಬಾಂಗ್ಲಾದೇಶ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಸ್ಪಿನ್ನರ್ ಕೂಡ ಆಗಿರುವ ನಾಯಕ ಶಕಿಬ್ ಅಲ್ ಹಸನ್ ದ್ವಿತೀಯ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡುವುದು ಅನುಮಾನವಾದ್ದರಿಂದ ನಾಸುಮ್ ಅಹ್ಮದ್ ಅವರಿಗೆ ಅವಕಾಶ ನೀಡಲಾಗಿದೆ. ನಾಸುಮ್ ಸೀಮಿತ ಓವರ್‌ಗಳ 32 ಪಂದ್ಯಗಳನ್ನಾಡಿದರೂ ಇನ್ನೂ ಟೆಸ್ಟ್ ಆಡಿಲ್ಲ.
ಶಕಿಬ್ ಭುಜದ ನೋವಿಗೆ ಸಿಲುಕಿದ್ದಾರೆ. ಅಲ್ಲದೇ ದ್ವಿತೀಯ ಏಕದಿನ ಪಂದ್ಯದ ವೇಳೆ ಉಮ್ರಾನ್ ಮಲಿಕ್ ಅವರ ಎಸೆತವೊಂದು ಪಕ್ಕೆಲುಬಿಗೆ ಬಿದ್ದಿತ್ತು. ಇದರ ನೋವು ಕೂಡ ಪೂರ್ತಿ ವಾಸಿಯಾಗಿಲ್ಲ. ಮೊದಲ ಟೆಸ್ಟ್‌ನಲ್ಲಿ ಶಕಿಬ್ ಕೇವಲ 12 ಓವರ್ ಎಸೆದಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ಬೌಲಿಂಗ್ ನಡೆಸಿರಲಿಲ್ಲ.
ಪ್ರಧಾನ ವೇಗಿ ಇಬಾದತ್ ಹುಸೇನ್ ಕೂಡ ಬೆನ್ನುನೋವಿನಿಂದಾಗಿ ದ್ವಿತೀಯ ಇನಿಂಗ್ಸ್‌ನಲ್ಲಿ ಬೌಲಿಂಗ್‌ಗೆ ಇಳಿದಿರಲಿಲ್ಲ. ಆದರೆ ತಂಡದಲ್ಲಿ ಮುಂದುವರಿದಿದ್ದಾರೆ. ದ್ವಿತೀಯ ಟೆಸ್ಟ್ ಡಿ.22ರಿಂದ 26ರ ತನಕ ಢಾಕಾದಲ್ಲಿ ನಡೆಯಲಿದೆ.
ಬಾಂಗ್ಲಾದೇಶ ತಂಡ: ಶಕಿಬ್ ಅಲ್ ಹಸನ್ (ನಾಯಕ), ಮಹ್ಮದುಲ್ ಹಸನ್ ಜಾಯ್, ನಜ್ಮುಲ್ ಹುಸೇನ್, ಮೊಮಿನುಲ್ ಹಕ್, ಯಾಸಿರ್ ಅಲಿ, ಮುಶ್ಫಿಕರ್ ರಹೀಂ, ಲಿಟನ್ ದಾಸ್, ನುರುಲ್ ಹಸನ್, ಮೆಹೆದಿ ಹಸನ್ ಮಿರಾಜ್, ತೈಜುಲ್ ಇಸ್ಲಾಮ್, ತಸ್ಕಿನ್ ಅಹ್ಮದ್, ಖಾಲಿದ್ ಅಹ್ಮದ್, ಝಾಕಿರ್ ಹಸನ್, ರೆಜಾವುರ್ ರೆಹಮಾನ್ ರಾಜ.