Advertisement
ಬಾಂಗ್ಲಾದ ಪರಿಸ್ಥಿತಿ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಅಲ್ಲಿರುವ ಭಾರತೀಯರ ರಕ್ಷಣೆಗಾಗಿ ರಾಯಭಾರ ಕಚೇರಿ ಯೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಕೇಂದ್ರ ಹೇಳಿದೆ. ಅಲ್ಲದೆ ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಗಡಿ ಪ್ರದೇಶದ ಜನರ ಜತೆ ಬಿಎಸ್‌ಎಫ್ ಮುಖ್ಯಸ್ಥರು ಮಂಗಳವಾರ ಮಾತುಕತೆ ನಡೆಸಿದ್ದಾರೆ.
ಬಾಂಗ್ಲಾದಲ್ಲಿರುವ ಸುಮಾರು 20 ಸಾವಿರ ಮಂದಿ ಭಾರತೀಯರ ರಕ್ಷಣೆಗೆ ಸರಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲಿರುವ ವಿದ್ಯಾರ್ಥಿಗಳ ಜತೆಗೆ ಸರಕಾರ ನಿರಂತರ ಸಂಪರ್ಕದಲ್ಲಿದ್ದು, ಅಲ್ಲಿರುವ ಹಿಂದೂ ಅಲ್ಪಸಂಖ್ಯಾಕರ ರಕ್ಷಣೆಗೆ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಗಡಿ ಪ್ರದೇಶದಲ್ಲಿ ಭದ್ರತೆ ಹೆಚ್ಚಳ: ಗಡಿ ದಾಟಿ ಬಾಂಗ್ಲಾದೇಶೀಯರು ಭಾರತ ಪ್ರವೇಶಿಸುವ ಸಾಧ್ಯತೆ ಇರುವ ಕಾರಣ ಗಡಿ ಭದ್ರತಾ ಪಡೆಯು ಗಡಿಯಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೇರಿಸಿದೆ. ರಜೆಯಲ್ಲಿರುವ ಬಿಎಸ್‌ಎಫ್ ಸಿಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ್ದು, 4,096 ಕಿ.ಮೀ. ಉದ್ದದ ಗಡಿಯಲ್ಲಿ ಕಟ್ಟುನಿಟ್ಟಾದ ಕಾವಲಿಗೆ ಸೂಚಿಸಲಾಗಿದೆ. ಮಂಗಳವಾರ ಗಡಿ ಪ್ರದೇಶಕ್ಕೆ ಭೇಟಿ ನೀಡಿದ ಬಿಎಸ್‌ಎಫ್ ಮುಖ್ಯಸ್ಥರು, ಭದ್ರತಾ ಸ್ಥಿತಿಯ ಪರಿಶೀಲನೆ ನಡೆಸಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ.
Related Articles
Advertisement
ರಾಜ್ಯಸಭೆಯಲ್ಲೂ ಚರ್ಚೆ: ಬಾಂಗ್ಲಾದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾವಿಸಲಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತೀಯರ ಸುರಕ್ಷೆ ಬಗ್ಗೆ ಕ್ರಮ ಕೈಗೊಂಡಿರುವ ಕುರಿತು ಮಾಹಿತಿ ನೀಡಿದ್ದಾರೆ.
ರೈಲುಸೇವೆ ಬಂದ್, ವಿಮಾನ ಸಂಚಾರ ಮುಂದುವರಿಕೆ: ಭಾರತ ಮತ್ತು ಬಾಂಗ್ಲಾದೇಶದ ನಡುವಣ ಎಲ್ಲ ರೈಲು ಸಂಚಾರವನ್ನು ಭಾರತ ಸರಕಾರ ರದ್ದು ಮಾಡಿದೆ. ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ದಿಲ್ಲಿಯಿಂದ ಬಾಂಗ್ಲಾ ರಾಜಧಾನಿ ಢಾಕಾಕ್ಕೆ ಮಂಗಳವಾರ ಸಂಜೆಯಿಂದ ವಿಮಾನ ಸೇವೆಯನ್ನು ಪುನಾರಂಭಿಸಿದೆ. ವಿಸ್ತಾರ ಸಂಸ್ಥೆಯು ಬುಧವಾರದಿಂದ ಸಂಚಾರ ಆರಂಭಿಸುವುದಾಗಿ ಹೇಳಿದೆ.
ಮಧ್ಯಾಂತರ ಸರಕಾರಕ್ಕೆ ಯೂನುಸ್ ನೇತೃತ್ವಬಾಂಗ್ಲಾದೇಶದ ಸಂಸತ್ತನ್ನು ವಿಸರ್ಜಿಸುವುದಾಗಿ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಪ್ರಮುಖ ಪಕ್ಷಗಳ ಜತೆಗೆ ಚರ್ಚಿಸಿ ಅವರು ತೀರ್ಮಾನ ಕೈಗೊಂಡಿದ್ದಾರೆ. ಮಧ್ಯಾಂತರ ಸರಕಾರದ ನೇತೃತ್ವ ವಹಿಸಲು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್‌ಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಅದಕ್ಕೆ ಅವರು ಸಮ್ಮತಿಸಿದ್ದಾರೆ. ದೋವಲ್ ಜತೆ ಅಮಿತ್ ಶಾ ಸಭೆ
ದೇಶದಲ್ಲಿ ಭದ್ರತೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ ಅಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ರಕ್ಷಣೆಗಾಗಿ ಸರಕಾರ ಸಕಲ ವ್ಯವಸ್ಥೆ ಕೈಗೊಂಡಿದೆ. ಸರ್ವ ಪಕ್ಷ ಸಭೆ
ಬಾಂಗ್ಲಾದೇಶದ ಪರಿಸ್ಥಿತಿ ಬಗ್ಗೆ ಮಂಗಳವಾರ ದಿಲ್ಲಿಯಲ್ಲಿ ಸರ್ವಪಕ್ಷ ಸಭೆ ನಡೆಸಲಾಗಿದೆ. ಬಾಂಗ್ಲಾದ ಪರಿಸ್ಥಿತಿ ಹಾಗೂ ಇದರಲ್ಲಿ ಪಾಕ್ ಕೈವಾಡದ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಈ ವೇಳೆ ಸಚಿವ ಜೈಶಂಕರ್ ಹೇಳಿದ್ದಾರೆ. ಸದ್ಯ ಶೇಖ್ ಹಸೀನಾ ಅವರು ಆಘಾತದಲ್ಲಿದ್ದಾರೆ. ಅವರು ಚೇತರಿಸಿಕೊಳ್ಳುವವರೆಗೆ ಕಾಲಾವಕಾಶ ನೀಡಿ, ಅನಂತರ ಅವರೊಂದಿಗೆ ಸರಕಾರ ಮಾತುಕತೆ ನಡೆಸಲಿದೆ. ಬಳಿಕ ಮುಂದಿನ ಕ್ರಮ ಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸರ್ವ ಪಕ್ಷಗಳಿಗೆ ಜೈಶಂಕರ್ ಮಾಹಿತಿ ನೀಡಿ ದ್ದಾರೆ. ಹಸೀನಾ ಕೊನೆಯ ಕ್ಷಣದಲ್ಲಿ ಭಾರತ ಸರಕಾರವನ್ನು ಸಂಪರ್ಕಿಸಿ, ತತ್‌ಕ್ಷಣವೇ ತಾನು ಅಲ್ಲಿಗೆ ಬರುತ್ತಿದ್ದೇನೆ ಎಂದು ಕೋರಿಕೆ ಸಲ್ಲಿಸಿ ದರು ಎಂದು ಜೈಶಂಕರ್ ತಿಳಿಸಿದ್ದಾರೆ. ಬಾಂಗ್ಲಾ ವಿಷಯದಲ್ಲಿ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ವಿಪಕ್ಷ ಒಕ್ಕೂಟ ತಿಳಿಸಿದೆ.