Advertisement

Belthangady ರಸ್ತೆ ಅತಿಕ್ರಮಣ: ಪೊಲೀಸ್‌ ಭದ್ರತೆಯಲ್ಲಿ ತೆರವು

11:12 PM Sep 02, 2024 | Team Udayavani |

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಡ್ಯದಿಂದ ಹೊಳೆಯವರೆಗಿನ ಗ್ರಾಮ ಪಂಚಾಯತ್‌ ರಸ್ತೆ ಅತಿಕ್ರಮಣವಾಗಿದ್ದು, ಇದನ್ನು ಸೆ. 2ರಂದು ಪೊಲೀಸ್‌ ಭದ್ರತೆಯಲ್ಲಿ ಗ್ರಾಮ ಪಂಚಾಯತ್‌ ತೆರವುಗೊಳಿಸಿದೆ.

Advertisement

ಸ್ಥಳೀಯರೊಬ್ಬರು ರಸ್ತೆಯನ್ನು ಅತಿಕ್ರಮಣ ಮಾಡಿ ಮುಚ್ಚಿರುವ ಕುರಿತು ಕಳೆದ ಗ್ರಾಮಸಭೆಯಲ್ಲಿ ಚರ್ಚೆಯಾಗಿತ್ತು. ರಸ್ತೆ ಬಂದ್‌ ಮಾಡಿರುವ ಪರಿಣಾಮ ವಿದ್ಯುತ್‌ ಪರಿವರ್ತಕ ದುರಸ್ತಿ ಸಹಿತ ನೀರಿನ ಟ್ಯಾಂಕ್‌ ಸಂಪರ್ಕಕ್ಕೆ ಸಂಕಷ್ಟವಾಗಿರುವ ಎಂದು ಸ್ಥಳೀಯರು ದೂರು ನೀಡಿದ್ದರು.

ಗ್ರಾಮಸಭೆಯ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅತಿಕ್ರಮಣವನ್ನು ತೆರವುಗೊಳಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಸೆ. 2ರಂದು ಪೊಲೀಸ್‌ ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ನಡೆಸಿ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.

ಜೀಪು ಅಡ್ಡವಿಟ್ಟು ತಡೆಗೆ ಯತ್ನ: ಅತಿಕ್ರಮಣ ತೆರವುಗೊಳಿಸಲು ಮಡ್ಯದಿಂದ ಹೊಳೆಯವರೆಗೆ ಸಾಗಬೇಕಿತ್ತು. ಈ ರಸ್ತೆಯಲ್ಲಿ ಒಂದು ಟಯರ್‌ ಕಳಚಿದ ಸ್ಥಿತಿಯಲ್ಲಿ ಜೀಪನ್ನು ನಿಲ್ಲಿಸಲಾಗಿತ್ತು. ರಸ್ತೆಯ ಮಧ್ಯೆ ಜೀಪನ್ನು ನಿಲ್ಲಿಸಲಾಗಿದೆ ಎಂದು ಸ್ಥಳೀಯರು ದೂರಿದರು. ವಾಗ್ವಾದ ನಡೆದು, ಕೊನೆಗೆ ರಸ್ತೆಯ ಬದಿಯಿಂದ ಜೆಸಿಬಿ ಸಾಗಿ ತೋಡಿಗೆ ಅಕ್ರಮವಾಗಿ ಹಾಕಲಾಗಿದ್ದ ಮೋರಿಯನ್ನೂ ತೆರವುಗೊಳಿಸಿ, ಸ್ಥಳೀಯರಿಗೆ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಧರ್ಮಸ್ಥಳ ಪೊಲೀಸ್‌ ಠಾಣೆಯ ಉಪ ನಿರೀಕ್ಷಕ ಕಿಶೋರ್‌ ಹಾಗೂ ಸಿಬಂದಿ ಭದ್ರತೆ ಒದಗಿಸಿದರು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಪೂರ್ಣಾಕ್ಷ, ಮಾಜಿ ಅಧ್ಯಕ್ಷ ಯಶವಂತ ಗೌಡ, ಸದಸ್ಯರಾದ ಭಾಸ್ಕರ, ರಾಮೇಂದ್ರ, ವನಿತಾ, ಇಂದಿರಾ, ರೇಣುಕಾ, ಅಪ್ಪಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರವಿ ಬಸಪ್ಪನಗೌಡ, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next