ಢಾಕಾ: ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಬಾಂಗ್ಲಾದೇಶ ನಲುಗಿ ಹೋಗಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಬಾಂಗ್ಲಾದೇಶ್ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಜ್ಞಾತ ಸ್ಥಳಕ್ಕೆ ತೆರಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಮಂತ್ರಿಯ ಅಧಿಕೃತ ನಿವಾಸವನ್ನು ಶೇಖ್ ಹಸೀನಾ ಮತ್ತು ಸಹೋದರಿ ಅವರು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿರುವುದಾಗಿ ಎಎಫ್ ಪಿ ವರದಿ ತಿಳಿಸಿದೆ. ಮತ್ತೊಂದೆಡೆ ಶೇಖ್ ಹಸೀನಾ ಅವರು ಭಾಷಣವನ್ನು ರೆಕಾರ್ಡ್ ಮಾಡಲು ಬಯಸಿದ್ದು, ಅದಕ್ಕೆ ಯಾವುದೇ ಅವಕಾಶ ದೊರಕಲಿಲ್ಲ ಎಂದು ಮೂಲಗಳು ತಿಳಿಸಿವೆ.
ಕರ್ಫ್ಯೂವನ್ನು ಧಿಕ್ಕರಿಸಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿ, ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಅರಮನೆಗೆ ಮುತ್ತಿಗೆ ಹಾಕಿ, ಹಲವೆಡೆ ಬೆಂಕಿ ಹಚ್ಚಿರುವ ದೃಶ್ಯ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಸ್ಥಳೀಯ ಮಾಧ್ಯಮದ ಅಂದಾಜಿನ ಪ್ರಕಾರ, ಸುಮಾರು 4,00,000 ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಆದರೆ ನಿಖರವಾಗಿ ಎಷ್ಟು ಮಂದಿ ಪ್ರತಿಭಟನಾಕಾರರು ಇದ್ದಾರೆ ಎಂಬುದು ಊಹಿಸುವುದು ಕಷ್ಟವಾಗಿದೆ ಎಂದು ಹೇಳಿದೆ.
ಬಾಂಗ್ಲಾದೇಶ್ ಸೇನಾ ಮುಖ್ಯಸ್ಥ ವಾಕರ್ ಯುಝ್ ಝಮಾನ್ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ, ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಅಂದಾಜು 20 ಲಕ್ಷ ಮಂದಿ ಹಸೀನಾ ಅವರ ಅರಮನೆಯತ್ತ ಜಾಥಾ ಹೊರಟಿದ್ದು, ಈ ಸಂದರ್ಭದಲ್ಲಿ ಹಿಂಸಾಚಾರ ವಿಕೋಪಕ್ಕೆ ತೆರಳಿರುವುದಾಗಿ ವರದಿ ವಿವರಿಸಿದೆ.
ಬಾಂಗ್ಲಾದೇಶದ ಪ್ರಧಾನಿ ಸಚಿವಾಲಯದ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಎಎನ್ ಐ ಜತೆ ಮಾತನಾಡಿ, ಪ್ರಧಾನಿ ಶೇಖ್ ಹಸೀನಾ ಅವರು ಢಾಕಾದ ಅಧಿಕೃತ ನಿವಾಸವನ್ನು ತೊರೆದಿದ್ದು, ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಢಾಕಾದ ಸದ್ಯದ ಸ್ಥಿತಿ ಸೂಕ್ಷ್ಮವಾಗಿದ್ದು, ಪ್ರಧಾನಿ ನಿವಾಸವನ್ನು ಭಾರೀ ಸಂಖ್ಯೆಯ ಪ್ರತಿಭಟನಾಕಾರರು ತಮ್ಮ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ಹಂಗಾಮಿ ಸರ್ಕಾರ:
ಶೇಖ್ ಹಸೀನಾ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡಿದ್ದು, ಹಂಗಾಮಿ ಸರ್ಕಾರ ಬಾಂಗ್ಲಾದಲ್ಲಿ ಚಾಲ್ತಿಗೆ ಬರಲಿದೆ ಎಂದು ಆರ್ಮಿ ಮುಖ್ಯಸ್ಥ ಝಮಾನ್ ಘೋಷಿಸಿದ್ದಾರೆ. ದೇಶದಲ್ಲಿ ನಡೆದ ಎಲ್ಲಾ ಕೊಲೆಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ರಾಜೀನಾಮೆ ನೀಡುತ್ತಿದ್ದಂತೆಯೇ ಭಾರತ ಹೈ ಅಲರ್ಟ್ ಘೋಷಿಸಿದೆ. ಶೇಖ್ ಹಸೀನಾ ರಾಜೀನಾಮೆ ನೀಡಿದ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಪ್ರತಿಭಟನಾಕಾರರು ಪಟಾಕಿ ಸಿಡಿಸಿ ಸಂಭ್ರಮಿಸಿರುವುದಾಗಿ ವರದಿ ತಿಳಿಸಿದೆ.