ಢಾಕಾ: ಮಾಧ್ಯಮ ಸಂಸ್ಥೆಗಳು ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಸುದ್ದಿಗಳನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅವುಗಳನ್ನು ಬಂದ್ ಮಾಡಲಾಗುವುದು ಎಂದು ಬಾಂಗ್ಲಾದೇಶದ ಮಧ್ಯಾಂತರ ಸರಕಾರವು ಭಾನುವಾರ(ಆಗಸ್ಟ್ 11) ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾಧ್ಯಮಗಳು ಸತ್ಯವನ್ನು ಎತ್ತಿಹಿಡಿಯದಿದ್ದಾಗ ರಾಷ್ಟ್ರವು ತತ್ತರಿಸುತ್ತದೆ ಎಂದು ಹಂಗಾಮಿ ಸರ್ಕಾರದ ಗೃಹ ವ್ಯವಹಾರಗಳ ಸಲಹೆಗಾರ, ನಿವೃತ್ತ ಬ್ರಿಗೇಡಿಯರ್ ಜನರಲ್ ಎಂ. ಶಖಾವತ್ ಹೊಸೇನ್ ಎಚ್ಚರಿಕೆ ನೀಡಿದ್ದಾರೆ.
ರಾಜರ್‌ಬಾಗ್ ಸೆಂಟ್ರಲ್ ಪೊಲೀಸ್ ಆಸ್ಪತ್ರೆಯಲ್ಲಿ ಗಾಯಗೊಂಡ ಪೊಲೀಸರನ್ನು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಎಂ. ಶಖಾವತ್ , ಸತ್ಯವನ್ನು ಪ್ರಸ್ತುತಪಡಿಸದ ಮಾಧ್ಯಮಗಳು ಪ್ರಾಮಾಣಿಕವಾಗಿ ವರದಿ ಮಾಡಲು ವಿಫಲವಾದಾಗ ದೇಶವು ಹದಗೆಡುತ್ತದೆ. ಮಾಧ್ಯಮಗಳು ಘಟನೆಗಳನ್ನು ನಿಖರವಾಗಿ ವರದಿ ಮಾಡಿದ್ದರೆ, ಪೊಲೀಸರನ್ನು ಒಳಗೊಂಡು ಪ್ರಸ್ತುತ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.
“ಮಾಧ್ಯಮವು ಸಾಮಾನ್ಯವಾಗಿ ಸತ್ಯವನ್ನು ನಿರ್ಲಕ್ಷಿಸುತ್ತದೆ. ಟಾಕ್ ಶೋಗಳಲ್ಲಿ ವಸ್ತುನಿಷ್ಠ ಚರ್ಚೆಯ ಕೊರತೆಯಿದ್ದು, ಮಾಧ್ಯಮಗಳು ನಿಖರವಾದ ಮಾಹಿತಿಯನ್ನು ಒದಗಿಸಲು ವಿಫಲವಾಗಿವೆ” ಎಂದು ಹೇಳಿದರು.
ಬಾಂಗ್ಲಾದೇಶದ ಮಧ್ಯಾಂತರ ಸರಕಾರದ ಮುಖ್ಯಸ್ಥರಾಗಿ ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನುಸ್ ಅಧಿಕಾರ ಸ್ವೀಕರಿಸಿದ್ದಾರೆ.