ಹೊಸದಿಲ್ಲಿ: ಭಾರತದ ವಿರುದ್ದ ನಡೆಯುತ್ತಿರುವ ಟಿ20 ಸರಣಿಯ ಮಧ್ಯದಲ್ಲೇ ಬಾಂಗ್ಲಾದೇಶದ (Bangladesh) ಹಿರಿಯ ಆಟಗಾರರೊಬ್ಬರು ಟಿ20 ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಶಕೀಬ್ ಅಲ್ ಹಸನ್ ವಿದಾಯ ಹೇಳಿದ ಬೆನ್ನಲ್ಲೇ ಮತ್ತೊಬ್ಬ ಸೀನಿಯರ್ ಆಟಗಾರ ಮಹಮ್ಮದುಲ್ಲಾ (Mahmudullah) ಕೂಡಾ ಟಿ20 (T20 Cricket) ಮಾದರಿಗೆ ನಿವೃತ್ತಿ ಘೊಷಣೆ ಮಾಡಿದ್ದಾರೆ. ಭಾರತದ ವಿರುದ್ದದ ಸರಣಿಯೇ ತನ್ನ ಕೊನೆಯ ಟಿ20 ಸರಣಿ ಎಂದು ಘೋಷಣೆ ಮಾಡಿದ್ದಾರೆ.
38 ವರ್ಷದ ಆಟಗಾರ ಮಹಮ್ಮದುಲ್ಲಾ ಅವರು ತನ್ನ ಸುದೀರ್ಘ 17 ವರ್ಷದ ಟಿ20 ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.
ಮಹಮ್ಮದುಲ್ಲಾ ಅವರು ಭಾರತ ಸರಣಿಯ ನಂತರ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ ಎಂದು ಬಹಿರಂಗಪಡಿಸಿದರು. ವಿಶೇಷವಾಗಿ ಕಳೆದ ವರ್ಷ ವೈಯಕ್ತಿಕವಾಗಿ ಯಶಸ್ವಿ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ಮೇಲೆ ಕೇಂದ್ರೀಕರಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ. ಅವರು ಈ ಡಿಸೆಂಬರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧರಾಗುವ ಗುರಿಯನ್ನು ಹೊಂದಿದ್ದಾರೆ.
“ಈ ಸರಣಿಗೆ ಬರುವ ಮೊದಲೇ ನಿವೃತ್ತಿಯ ಬಗ್ಗೆ ಯೋಚನೆ ಮಾಡಿದ್ದೆ. ಕೋಚ್ ಮತ್ತು ನಾಯಕನ ಜತೆ ಇದರ ಬಗ್ಗೆ ಮಾತನಾಡಿದ್ದೆ. ಬಿಸಿಬಿ ಅಧ್ಯಕ್ಷರೂ ಮಾಹಿತಿ ನೀಡಿದ್ದೇನೆ. ಈ ಮಾದರಿಯಿಂದ ದೂರವಾಗಿ ಏಕದಿನದತ್ತ ಹೆಚ್ಚು ಗಮನ ಹರಿಸಲು ಇದು ಸರಿಯಾದ ಸಮಯ” ಎಂದರು ಮಹಮ್ಮದುಲ್ಲಾ ಹೇಳಿದರು.
ಮಹಮ್ಮದುಲ್ಲಾ 2007ರಲ್ಲಿ ಕೀನ್ಯಾ ವಿರುದ್ದ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಅವರು ಬಾಂಗ್ಲಾ ತಂಡದ ಪ್ರಮುಖ ಭಾಗವಾಗಿದ್ದರು. ಸುದೀರ್ಘ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನ ಹೊಂದಿರುವ ಆಟಗಾರರ ಪೈಕಿ ಮಹಮ್ಮದುಲ್ಲಾ ಮೂರನೇ ಸ್ಥಾನದಲ್ಲಿದ್ದಾರೆ.
139 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಹಮ್ಮದುಲ್ಲಾ 117.74 ಸ್ಟ್ರೈಕ್ ರೇಟ್ ನಲ್ಲಿ 2,395 ರನ್ ಗಳಿಸಿದ್ದಾರೆ ಮತ್ತು 40 ವಿಕೆಟ್‌ಗಳನ್ನು ಕಬಳಿಸಿದ್ದಾರೆ.