Advertisement

ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್; ಅಳುತ್ತಲೇ ನಿರ್ಧಾರ ಪ್ರಕಟಿಸಿದ ಬಾಂಗ್ಲಾ ನಾಯಕ

02:26 PM Jul 06, 2023 | Team Udayavani |

ಚಿತ್ತಗಾಂಗ್: ಏಕದಿನ ವಿಶ್ವಕಪ್ ಗೆ ಕೇವಲ ಮೂರು ತಿಂಗಳು ಬಾಕಿ ಉಳಿದಿರುವಾಗ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. 16 ವರ್ಷಗಳ ಕಾಲ ಬಾಂಗ್ಲಾದೇಶದ ಪರ ಆಡಿದ ತಮೀಮ್, ತಕ್ಷಣದಿಂದ ಅನ್ವಯವಾಗುವಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

Advertisement

ಬಾಂಗ್ಲಾದೇಶ ತಂಡದ ಅಫ್ಘಾನಿಸ್ತಾನ ವಿರುದ್ಧದ ಸರಣಿಯ ನಡುವೆಯೇ ತಮೀಮ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ಸೋಲನುಭವಿಸಿತ್ತು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಅವರು ಅತ್ಯಂತ ಭಾವುಕರಾಗಿ ಕಣ್ಣೀರು ಹಾಕಿ ತಮ್ಮ ವಿದಾಯ ನಿರ್ಧಾರವನ್ನು ಘೋಷಿಸಿದರು.

“ಇದು ನನಗೆ ಅಂತ್ಯ. ನಾನು ನನ್ನ ಕೈಲಾದಷ್ಟು ನೀಡಿದ್ದೇನೆ. ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ಈ ಕ್ಷಣದಿಂದ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ” ಎಂದು ತಮೀಮ್ ಹೇಳಿದ್ದಾರೆ.

ಇದನ್ನೂ ಓದಿ:Octopus: ವಾಂತಿಯಾಗುತ್ತಿದೆ ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯ ಗಂಟಲಲ್ಲಿ ಆಕ್ಟೋಪಸ್ ಪತ್ತೆ!

Advertisement

“ನಿನ್ನೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವೇ ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ನಾನು ತಕ್ಷಣದಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಇದು ಹಠಾತ್ ನಿರ್ಧಾರವಲ್ಲ. ನಾನು ಬೇರೆ ಬೇರೆ ಕಾರಣಗಳಿಂದ ಈ ಬಗ್ಗೆ ಯೋಚಿಸುತ್ತಿದ್ದೆ. ಅದನ್ನು ನಾನು ಇಲ್ಲಿ ಪ್ರಸ್ತಾಪಿಸಲು ಬಯಸುವುದಿಲ್ಲ. ನಾನು ನನ್ನ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದುಕೊಂಡಿದ್ದೇನೆ” ಎಂದರು.

“ಈ ಸುದೀರ್ಘ ಕಾಲದಲ್ಲಿ ನನ್ನ ಮೇಲೆ ಭರವಸೆಯಿಟ್ಟ ನನ್ನ ಸಹ ಆಟಗಾರರು, ಕೋಚ್ ಗಳು, ಕ್ರಿಕೆಟ್ ಮಂಡಳಿ ಸದಸ್ಯರು, ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳ ಬಯಸುತ್ತೇನೆ. ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಬಯಸುತ್ತೇನೆ. ಅವರ ಪ್ರೀತಿ ಮತ್ತು ನಂಬಿಕೆ ನನ್ನ ಪ್ರತಿ ಬಾರಿ ಬಾಂಗ್ಲಾದೇಶ ಅತ್ಯುತ್ತಮವಾದುದನ್ನು ಮಾಡಲು ಪ್ರೇರಣೆ ನೀಡಿದೆ. ನನ್ನ ಮುಂದಿನ ಹಂತದ ಜೀವನಕ್ಕೂ ನಿಮ್ಮ ಹಾರೈಕೆ ಇರಲಿ” ಎಂದು ತಮೀಮ್ ಗದ್ಗದಿತರಾಗಿ ಹೇಳಿದರು.

2007ರಲ್ಲಿ ಫೆಬ್ರವರಿಯಲ್ಲಿ ತಮೀಮ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 2007ರ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಅರ್ಧಶತಕ ಸಿಡಿಸಿ ತಂಡದ ಐತಿಹಾಸಿಕ ಜಯಕ್ಕೆ ಕಾರಣರಾಗಿದ್ದರು. ಬಾಂಗ್ಲಾ ವಿರುದ್ಧ ಸೋತ ಭಾರತ ಕೂಟದಿಂದ ಹೊರಬಿದ್ದಿತ್ತು.

ತಮೀಮ್ ಇಕ್ಬಾಲ್ ಅವರು ಬಾಂಗ್ಲಾದೇಶ ಪರ 69 ಟೆಸ್ಟ್ ಪಂದ್ಯಗಳಲ್ಲಿ 5082 ರನ್, 238 ಏಕದಿನ ಪಂದ್ಯಗಳಲ್ಲಿ 8224 ರನ್ ಮತ್ತು 78 ಟಿ20 ಪಂದ್ಯಗಳಲ್ಲಿ 1758 ರನ್ ಗಳಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 25 ಶತಕಗಳನ್ನು ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next